ಮಂಗಳೂರು, ಏಪ್ರಿಲ್ 3 :2011ರಲ್ಲಿ ನಡೆಸಲುದ್ದೇಶಿಸಿರುವ ಜನಗಣತಿಯು ಯಶಸ್ವಿಯಾಗಿ ನಡೆಯಲು ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿ ಮತ್ತು ನಗರಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಜನಗಣತಿ ಜಿಲ್ಲೆಯಲ್ಲಿ ಯಾವುದೇ ಲೋಪದೋಷಗಳಿಲ್ಲದೆ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಅವರು ಹೇಳಿದರು.
ಅವರಿಂದು ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅತ್ಯಧಿಕ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದಲ್ಲಿ 1872ರಲ್ಲಿ ಜನಗಣತಿ ಆರಂಭವಾಗಿದ್ದು, ಪ್ಲೇಗ್ ನಂತಹ ಮಹಾಮಾರಿಯಿರಲಿ ಅಥವಾ ಮಹಾಯುದ್ಧಗಳಿರಲಿ ಜನಗಣತಿ ನಿರಂತರ ಹಾಗೂ ಕರಾರುವಕ್ಕಾಗಿ ನಡೆಸಿ ಕೊಂಡು ಬಂದ ಇತಿಹಾಸ ನಮ್ಮದು ಎಂದ ಅಪರ ಜಿಲ್ಲಾಧಿಕಾರಿಗಳು, ಮನೆಗಣತಿ ಮತ್ತು ಜನಗಣತಿಗಳು ಕರಾರುವಕ್ಕಾಗಿ ನಡೆಯಲು ಅಧಿಕಾರಿಗಳು, ಸಿಬ್ಬಂದಿಗಳೊಂದಿಗೆ ಪ್ರತಿಯೊಬ್ಬ ನಾಗರೀಕರು ಹೊಣೆಯರಿತು ಮಾಹಿತಿ ನೀಡಿ ಸಹಕರಿಸಬೇಕೆಂದು ಸಭೆಯಲ್ಲಿ ಕೋರಿದರು.ಜಿಲ್ಲೆಯಲ್ಲಿ 650 ರಿಂದ 700 ಜನಸಂಖ್ಯೆಯಂತೆ ಮತ್ತು 150 ರಿಂದ 200 ಮನೆಯ ವ್ಯಾಪ್ತಿಗೆ ಒಂದು ಬ್ಲಾಕ್ ರಚಿಸಿ 6 ಬ್ಲಾಕ್ ಗಳಿಗೆ ಒಬ್ಬ ಮೇಲ್ವಿ ಚಾರಕರನ್ನು ನೇಮಿಸಲಾಗಿದೆ. ಗಣತಿ ಸಂಬಂದ ಅಗತ್ಯ ತರಬೇತಿಯನ್ನು ನೀಡಲಾಗಿದ್ದು, ಮಾರ್ಚ್ 23,24,25 ರಂದು ಮಾಸ್ಟರ್ ಟ್ರೈನರ್ಸ್ ಗೆ 3 ದಿನಗಳ ಸಮಗ್ರ ತರಬೇತಿ ನೀಡಲಾಗಿದೆ. ತಾಲೂಕು ತಹಸೀಲ್ದಾರರು ಮತ್ತು ಮುನ್ಸಿಪಲ್ ಚೀಫ್ ಆಫಿಸರ್ ಗಳಿಗೆ 4 ದಿನದ ತರಬೇತಿ ನೀಡಲಾಗಿದೆ. ಏಪ್ರಿಲ್ 9 ರಿಂದ 13ರ ವರೆಗೆ ಮುಖ್ಯ ತರಬೇತುದಾರರು ಗಣತಿದಾರರಿಗೆ ತರಬೇತಿ ನೀಡಲಿರುವರು.
ಇಂದು ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳ ಹೊಣೆಗಾರಿಕೆಯನ್ನು ವಿವರಿಸಿದರು. ಮನೆಗಣತಿ, ಜನಗಣತಿಯಲ್ಲಿ ಲೋಪಗಳಾದರೆ, ದೂರುಗಳಿದ್ದರೆ ನಗರ ಪಾಲಿಕೆ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ವಿಭಾಗ ತೆರೆಯಲಾಗುವುದು ಹಾಗೂ ದೂರು ದಾಖಲಿಸಲು ಟೋಲ್ ಫ್ರೀ ನಂಬರ್ 1077 ಗೆ ಕರೆ ಮಾಡಬಹುದಾಗಿದೆ. ಜಿಲ್ಲಾಧಿಕಾರಿ ಮತ್ತು ಮಹಾನಗರಪಾಲಿಕೆ ಆಯುಕ್ತರ ನೇತೃತ್ವದಲ್ಲಿ, ಸಾಂಖ್ಯಿಕ ಅಧಿಕಾರಿಗಳು, ಸಹಾಯಕ ದಂಡಾಧಿಕಾರಿಗಳು, ತಹಸೀಲ್ದಾರರು ಗಣತಿಯ ಮೇಲ್ವಿಚಾರಣೆ ನಡೆಸುವರು. ಕಾರ್ಮಿಕ, ಶ್ರಮಿಕ ವರ್ಗ ಸೇರಿದಂತೆ ಅತೀ ಹಿಂದುಳಿದ ವರ್ಗದವರು ಗಣತಿಯಲ್ಲಿ ದಂತೆ ಸೇರ್ಪಡೆ ಮಾಡಿಕೊಳ್ಳಲು ಐದು ಎನ್ ಜಿ ಒ ಗಳನ್ನು ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ. ಜಿಲ್ಲಾ ಅಂಕಿ ಸಂಖ್ಯೆ ಅಧಿಕಾರಿ ಕೆ.ರಮೇಶ್ ಉಪಾಧ್ಯ ಅವರು ಜನಗಣತಿ ಸಂದರ್ಭದಲ್ಲಿ ಯಾವುದೇ ಲೋಪಗಳು ಸಂಭವಿಸಿದಂತೆ ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆ ಹಾಗೂ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಸಭೆಗೆ ಮಾಹಿತಿ ನೀಡಿದರು.