ಮಂಗಳೂರು,ಏ.19: ಜನರಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿಸಲು, ಕನ್ನಡದ ಬಗ್ಗೆ ಜಾಗೃತರಾಗಲು ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನಗಳು ಅಗತ್ಯವಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಹೇಳಿದರು.
ಮಹಾ ನಗರ ಪಾಲಿಕೆಯ ಕಟ್ಟಡದಲ್ಲಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಸ್ವಾಗತ ಸಮಿತಿ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗಷ್ಟೇ ಜಿಲ್ಲಾ ಸಾಹಿತ್ಯ ಸಮ್ಮೇಳನ ಮುಗಿದಿದ್ದು, ತಾಲೂಕು ಸಾಹಿತ್ಯ ಸಮ್ಮೇಳನ ಇನ್ನಷ್ಟು ಅದ್ದೂರಿಯಾಗಿ, ಸಂಭ್ರಮದಿಂದ ಅರ್ಥಪೂರ್ಣವಾಗಿ ಜರುಗಲಿ ಎಂದು ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲೇ ಮೇಯರ್ ಅವರು ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಿದರು. ಶಾಸಕರಾದ ಎನ್. ಯೋಗೀಶ್ ಭಟ್, ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರಕುಮಾರ್, ವಿಪಕ್ಷ ಸಚೇತಕ ಅಭಯಚಂದ್ರ ಜೈನ್, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಶಂಕರ್ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಉಪಸ್ಥಿತರಿದ್ದರು.
ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸರ್ವೋತ್ತಮ ಅಂಚನ್ ಸ್ವಾಗತಿಸಿದರು. ಭುವನಾಭಿರಾಮ ಉಡುಪ ವಂದಿಸಿದರು.