ಮಂಗಳೂರು,ಏ.10: ರಸ್ತೆ,ರೈಲು,ಜಲ,ವಾಯುಮಾರ್ಗ ಹಾಗೂ ಐದು ಮೆಡಿಕಲ್ ಕಾಲೇಜುಗಳನ್ನು ಹೊಂದಿರುವ ಏಕೈಕ ನಗರ ಎಂಬ ಹಿರಿಮೆ ಮಂಗಳೂರಿಗಿದ್ದು, ಪ್ರವಾಸೋದ್ಯಮಕ್ಕೆ ದಕ್ಷಿಣ ಕನ್ನಡ ಜಿಲ್ಲೆ ಅತಿ ಪ್ರಶಸ್ತ ಸ್ಥಳ ಎಂದು ಸಾರಿಗೆ ಇಲಾಖೆ ಮುಖ್ಯ ಕಾರ್ಯದರ್ಶಿ ಎಂ.ಕೆ.ಶಂಕರಲಿಂಗೇಗೌಡ ಹೇಳಿದರು.
ಅವರು ಏಪ್ರಿಲ್ 9ರಂದು ನಗರದಲ್ಲಿ ಮಂಗಳೂರು ಅಸೋ ಸಿಯೇಷನ್ ಆಫ್ ಟ್ರಾವೆಲ್ ಏಜೆಂಟ್ಸ್ (ಮಾತಾ) ದ ಉದ್ಘಾಟನಾ ಸಮಾ ರಂಭವನ್ನು ನೆರವೇರಿಸಿ ಮಾತ ನಾಡುತ್ತಿದ್ದರು. ಪಕ್ಕದ ರಾಜ್ಯ ಕೇರಳದಲ್ಲಿ ಅವರ ಸಾಂಸ್ಕೃತಿಕ ಕಲೆಗಳಾದ ತ್ರಿಶೂರ್ ಪೂರಂ, ಓಣಂ ಕಾಲದಲ್ಲಿ ದೋಣಿ ಸ್ಪರ್ಧೆಗಳನ್ನು ಉಲ್ಲೇಖಿಸಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಹಲವು ಅದ್ಭುತಗಳಿದ್ದು, ಈ ಕುರಿತು ಪ್ರವಾಸಿಗಳಿಗೆ ಸೂಕ್ತ ಮಾಹಿತಿ ಹಾಗೂ ಅವರಿಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಚಿಂತನೆ ನಡೆಸಿ ಪ್ರವಾಸೋದ್ಯಮ ಮತ್ತು ಸಾರಿಗೆ ಇಲಾಖೆ ಜೊತೆಯಾಗಿ ಟ್ರಾವೆಲ್ ಏಜೆಂಟ್ ಗಳ ಸಂಪರ್ಕದೊಂದಿಗೆ ಸಮಗ್ರ ಯೋಜನೆ ಹಾಗೂ ಟಾರ್ಗೆಟ್ ಗ್ರೂಪ್ ನ ಜೊತೆ ಸಂವಹನದಲ್ಲಿ ಯಶಸ್ವಿಯಾದರೆ ಜಿಲ್ಲೆ ಉತ್ತಮ ಪ್ರವಾಸಿ ತಾಣವಾಗಿ ರೂಪುಗೊಳ್ಳುವುದರಲ್ಲಿ ಅನುಮಾನವಿಲ್ಲ ಎಂದರು.
ಈ ನಿಟ್ಟಿನಲ್ಲಿ ಅಕ್ಕಪಕ್ಕದ ಜಿಲ್ಲೆಗಳು ದಕ್ಷಿಣ ಕನ್ನಡದ ಜೊತೆ ಪ್ರವಾಸೋ ದ್ಯಮಕ್ಕೆ ಸಂಬಂಧಿಸಿದ ಪರಸ್ಪರ ಒಪ್ಪಂದಕ್ಕೆ ಮುಂದಾದರೆ ಅವರಿಗೆ ಸಾರಿಗೆ ತೆರಿಗೆ ಕಡಿತ ದಂತಹ ಸೌಲಭ್ಯಗಳನ್ನು ನೀಡುವ ಭರವಸೆಯನ್ನೂ ಅವರು ನೀಡಿದರು. ಇಂತಹ ಅತ್ಯುತ್ತಮಗಳನ್ನು ನಾವು ಹೊಂದಿದ್ದೇವೆ ಎಂಬುದನ್ನು ಇತರರಿಗೆ ತೋರಿಸುವಲ್ಲಿ ನಾವು ಯಶಸ್ವಿಯಾಗಬೇಕಿದೆ ಎಂದು ಶಂಕರ ಲಿಂಗೇಗೌಡ ಹೇಳಿದರು.ಟ್ರಾವೆಲ್ ಏಜೆಂಟ್ ಗಳು ಗ್ಲೋಬಲ್ ನೆಟ್ ವರ್ಕಿಂಗ್ ಜೊತೆ ಸಂಪರ್ಕ ಇರಿಸುವುದರಿಂದಾಗುವ ಲಾಭಗಳನ್ನು ವಿವರಿಸಿದ ಅವರು, ಹೊಸಪೇಟೆಯಲ್ಲಿರುವ ಮಲ್ಲಿಗೆ ಹೊಟೇಲ್ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು.
ದಕ್ಷಿಣ ಕನ್ನಡದಲ್ಲಿ ಶೈಕ್ಷಣಿಕ,ಆರೋಗ್ಯ ಹಾಗೂ ನಮ್ಮ ಸ್ಥಳೀಯ ಸಂಸ್ಕೃತಿ ಆಚರಣೆಗಳಿಂದ ಪ್ರವಾಸಿಗಳನ್ನು ಸೆಳೆಯುವುದರಲ್ಲಿ ನಾವು ಯಶಸ್ವಿಯಾಗಬಹುದೆಂದು ಹಿಂದೆ ಪ್ರವಾಸೋದ್ಯಮ ಇಲಾಖಾ ಕಾರ್ಯದರ್ಶಿಗಳು ಆಗಿದ್ದ ಅವರು ನುಡಿದರು. ಜಂಗಲ್ ಲಾಡ್ಜಸ್ ಮತ್ತು ರಿಸಾರ್ಟ್ ಗಳ ವ್ಯವಸ್ಥಾಪಕ ನಿರ್ದೇಶಕರಾದ ಎನ್.ಡಿ.ತಿವಾರಿ ಅವರು 'ಮಾತಾ'ದ ಅಧಿಕೃತ ವೆಬ್ ಸೈಟ್ ನ್ನು ಉದ್ಘಾಟಿಸಿ ಮಾತನಾಡಿ,ವಿದೇಶಿ ಪ್ರವಾಸಿಗರಷ್ಟೇ ದೇಶೀ ಪ್ರವಾಸಿಗರಿಗೂ ಆದ್ಯತೆ ನೀಡಬೇಕು ಎಂದರು.ಸಾಹಸ ಮತ್ತು ಇಕೋ ಟೂರಿಸಂಗೆ ಆದ್ಯತೆ ನೀಡುತ್ತಿರುವ ಕುರಿತು ಮಾಹಿತಿ ನೀಡಿದರು.ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಶಿವಲಿಂಗಪ್ಪ ಮಾತನಾಡಿದರು. ಮಾತಾದ ಅಧ್ಯಕ್ಷ ರೋಷನ್ ಪಿಂಟೋ ಉಪಸ್ಥಿತರಿದ್ದರು. ಪಿ ಆರ್ ಒ ಲೂಯಿಸ್ ಪಿಂಟೊ ಸ್ವಾಗತಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅಧ್ಯಕ್ಷತೆಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಯೋಜನೆ ರೂಪಿಸುವ ಸಂಬಂಧ ವಿಸ್ತೃತ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಆರೋಗ್ಯ ಪ್ರವಾಸೋದ್ಯಮ, ಸಾಂಸ್ಕೃತಿಕ ಪ್ರವಾಸೋದ್ಯಮ, ಬೀಚ್ ಪ್ರವಾಸೋದ್ಯಮ, ಇಕೋ ಪ್ರವಾಸೋದ್ಯಮ, ಸೇರಿದಂತೆ ವಿವಿಧ ಸಮಿತಿಗಳನ್ನು ತಜ್ಞರ ನೇತೃತ್ವದಲ್ಲಿ ರಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಕ್ಷೇತ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.