ಮಂಗಳೂರು,ಏಪ್ರಿಲ್ 23:ಆರೋಗ್ಯ ಇಲಾಖೆ ಸರಕಾರದ ಮಾನವೀಯ ಮುಖದಂತೆ ಕರ್ತವ್ಯ ನಿರ್ವಹಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಇನ್ಫೊಸಿಸ್ ಮಕ್ಕಳ ವಿಶೇಷ ಚಿಕಿತ್ಸಾ ಆಸ್ಪತ್ರೆಯಲ್ಲಿ ಆರ್ ಎ ಪಿ ಸಿಸಿ ಹಾಲ್ ನಲ್ಲಿ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ ಮತ್ತು ಆರೋಗ್ಯ ಇಲಾಖೆಗೆ ಖಾಸಗೀಯವರಿಂದ ಪ್ರಬಲ ಪೈಪೋಟಿಯಿದ್ದು, ಉತ್ತಮ ಸೇವೆಯಿಂದ ಮಾತ್ರ ಇಲಾಖೆ ಜನಮನ್ನಣೆ ಗಳಿಸಲು ಸಾಧ್ಯ ಎಂದರು. ಆರೋಗ್ಯದ ಬಗ್ಗೆ ಜಾಗೃತಿ ಇಂದಿನ ಸವಾಲಾಗಿದ್ದು, ಗಾಳಿ,ನೀರು ಎಲ್ಲವೂ ಕಲುಷಿತಗೊಳ್ಳುತ್ತಿದ್ದು, ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಸರಕಾರ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸ್ವಾಸ್ಥ ವಿಮಾ ಯೋಜನೆಗಳನ್ನು ಖಾಸಗಿಯವರೊಂದಿಗೆ ಸೇರಿ ಜಾರಿಗೆ ತರುತ್ತಿದ್ದು,ಆರೋಗ್ಯ ಆಡಳಿತವನ್ನು ಅಭಿವೃದ್ಧಿ ಪಡಿಸಲು ಸರ್ವಯತ್ನಗಳನ್ನು ಮಾಡಲಾಗುತ್ತಿದೆ ಎಂದರು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಹಾಗೂ ಮೂಲಸೌಕರ್ಯಗಳು ದೊರೆತಿದ್ದು, ಇನ್ನಷ್ಟು ಸೇವೆಯನ್ನು ಜನಪರ ಗೊಳಿಸಲು ಸಾಧ್ಯವಾಗಬೇಕು; ಇದರಲ್ಲಿ ಸಮುದಾಯದ ಪಾಲುಗಾರಿಕೆ ಅಗತ್ಯ ಎಂದರು. ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು,ಆರೋಗ್ಯ ಜಾಗೃತಿ ಮೂಡಿಸಲು ಪ್ರಸಕ್ತ ಸಾಲಿನಲ್ಲಿ ನಗರ ಆರೋಗ್ಯ ಸುಧಾರಿಸುವ ಘೋಷಣೆಯಿದ್ದು, ನಗರೀಕರಣ ಹಾಗೂ ಜನಸಂಖ್ಯಾ ಸ್ಫೋಟದಿಂದಾಗಿರುವ ಸಮಸ್ಯೆಗಳು, ಕಲುಷಿತತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ ಎಂದರು.1948ರಲ್ಲೇ ವಿಶ್ವಸಂಸ್ಥೆ ಈ ಬಗ್ಗೆ ನಿರ್ಣಯ ತೆಗೆದುಕೊಂಡಿದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಸಂತೋಷ್ ಕುಮಾರ್ ಭಂಡಾರಿ ಅವರು ವಹಿಸಿದ್ದರು. ಡಾ. ವಿಶ್ವೇಶ್ವರ ಭಟ್ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಸರೋಜ, ಲೇಡಿಗೋಷನ್ ಡಾ. ಶಕುಂತಲಾ ಉಪಸ್ಥಿತರಿದ್ದರು.
ವಿಶ್ವ ಆರೋಗ್ಯ ದಿನಾಚರಣೆ ಸಂದರ್ಭದಲ್ಲಿ ವೆನ್ ಲಾಕ್ ಆಸ್ಪತ್ರೆಯ ಡಾ.ರಮೇಶ್, ಅರವಳಿಕೆ ತಜ್ಞರಾದ ಡಾ. ಜೆಸಿಂತ ಡಿಸೋಜ, ಮಕ್ಕಳ ತಜ್ಞ ಡಾ.ಬಾಲಕೃಷ್ಣ ಅವರಿಗೆ ನಗದು ಮತ್ತು ಗೌರವ ಕಾಣಿಕೆಯನ್ನು ನೀಡಲಾಯಿತು.ತಾಲೂಕು ಮಟ್ಟದಲ್ಲಿ ಸುಳ್ಯದ ಮಕ್ಕಳ ವಿಭಾಗದ ಡಾ. ರಮೇಶ್, ಅರವಳಿಕೆ ತಜ್ಞ ಡಾ. ಕರುಣಾಕರ ಕೆ.ವಿ, ಬೆಳ್ತಂಗಡಿಯ ಡಾ. ಪ್ರಕಾಶ್ ಕೊಕ್ಕಡ, ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಹೇಮಲತಾ, ಪುತ್ತೂರು ಈಶ್ವರಮಂಗಲದ ಡಾ.ಗೋಪಾಲಕೃಷ್ಣ ನಾಯಕ್, ಸುಳ್ಯದ ಡಾ. ಶ್ರೀರಂಗಪ್ಪ, ಬಂಟ್ವಾಳ ವಾಮದಪದವಿನ ಡಾ. ದುರ್ಗಾ ಪ್ರಸಾದ್, ಉಜಿರೆ ಪಿ ಎಚ್ ಸಿಯ ಡಾ.ರವೀಂದ್ರನಾಥ ಅವರಿಗೆ ಪ್ರಶಸ್ತಿಯನ್ನಿತ್ತು ಗೌರವಿಸಲಾಯಿತಲ್ಲದೆ, ಹಿರಿಯ ಶುಶ್ರೂಷಕಿಯರು, ಕಿರಿಯ ಆರೋಗ್ಯ ಸಹಾಯಕಿಯರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.