Thursday, April 1, 2010

ನಗರ ಆಸ್ತಿ ಹಕ್ಕು ಪತ್ರ ತಯಾರಿಸುವ ಮಹತ್ವಾಕಾಂಕ್ಷೆಯ ಯೋಜನೆಗೆ ಚಾಲನೆ

ಮಂಗಳೂರು,ಏಪ್ರಿಲ್1:ಭೂಮಾಪನ ಇಲಾಖೆ ಮಂಗಳೂರು ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಗರ ಆಸ್ತಿಗಳ ಹಕ್ಕು ಪತ್ರವನ್ನು ನೀಡಲು ಉದ್ದೇಶಿಸಿದ್ದು, ಈ ಸಂಬಂಧ ಈಗಾಗಲೇ ಕಾರ್ಯೋನ್ಮುಖವಾಗಿದೆ. ಸರಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಕೈಗೊಳ್ಳುತ್ತಿರುವ ಯೋಜನೆಗೆ ಸಾರ್ವಜನಿಕರ ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದ್ದಾರೆ.
ಇಂದು ಈ ಸಂಬಂಧ ಜಿಲ್ಲಾ ಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ನಗರ ಆಸ್ತಿ ಹಕ್ಕು ಪತ್ರದಿಂದ ಸಾರ್ವಜನಿಕ ರಿಗಾಗುವ ಅನುಕೂಲಗಳನ್ನು ವಿವರಿಸಿದರು. ಮಂಗಳೂರು ಸಮಗ್ರವಾಗಿ ನಗರ ಪ್ರದೇಶವಾಗಿ ಮಾರ್ಪಾಡುಗೊಂಡಿದ್ದು, ಭೂಕಂದಾಯ ಅಧಿನಿಯಮ ಮತ್ತು ನಿಯಮಗಳ ಮೇರೆಗೆ ಕ್ರಮಬದ್ಧವಾಗಿ ಸಿದ್ಧಪಡಿಸಲಾಗುವ ಆಸ್ತಿ ದಾಖಲೆ ನಗರ ಆಸ್ತಿಗಳ ಮಾಲಿಕತ್ವವನ್ನು ನಿರೂಪಿಸುವ ಶಾಸನಬದ್ಧ ಹಕ್ಕು ದಾಖಲೆಯಾಗಿರುತ್ತದೆ. ಈ ದಾಖಲೆ ಸರಕಾರ, ಸಾರ್ವಜನಿಕರಿಗೆ, ಹಣಕಾಸು ಸಂಸ್ಥೆ,ಬ್ಯಾಂಕ್, ಖಾಸಗಿ ವ್ಯಕ್ತಿಗಳೊಂದಿಗೆ ವ್ಯವಹರಿಸುವ ಕೆಲಸ ಕಾರ್ಯಗಳನ್ನು ಸುಲಭ ಗೊಳಿಸುತ್ತದೆ; ಹಾಗಾಗಿ ಯೋಜನೆ ಅನುಷ್ಠಾನಕ್ಕಾಗಿ ತಮ್ಮ ಆಸ್ತಿಯ ಅಳತೆಗಾಗಿ ಭೇಟಿ ನೀಡುವ ಇಲಾಖೆಯ ಸಿಬ್ಬಂದಿಗಳಿಗೆ ತಮ್ಮ ಆಸ್ತಿಗಳ ಗಡಿಗಳನ್ನು ತೋರಿಸುವುದಲ್ಲದೆ ತಮ್ಮಲ್ಲಿರುವ ಮಾಲೀಕತ್ವವನ್ನು ನಿರೂಪಿಸುವ ದಾಖಲೆಗಳ ನಕಲುಗಳನ್ನು ನೀಡಿ ಆಸ್ತಿ ಪತ್ರಗಳನ್ನು ಸಿದ್ಧಪಡಿಸಲು ಸಹಕರಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ. ಮಂಗಳೂರಿನಲ್ಲಿ ಈ ಬಗ್ಗೆ ಕಾರ್ಯಾರಂಭವಾಗಿದ್ದು, ಈ ಸಂಬಂಧ ನಾಗರೀಕರ ಅನುಕೂಲಕ್ಕೆ ಬೈಕಂಪಾಡಿ ಎಪಿಎಂಸಿ ವ್ಯಾಪ್ತಿಯ ಕಟ್ಟಡ ಹಾಗೂ ಮಹಾನಗರಪಾಲಿಕೆ ಕಟ್ಟಡದಲ್ಲಿ ಕಚೇರಿಗಳನ್ನು ಆರಂಭಿಸಲಾಗಿದೆ. ಸಮೀಕ್ಷಾ ಕಾರ್ಯ ಕಾಟಿಪಳ್ಳದ ಮೂರನೇ ಬ್ಲಾಕ್ ನಿಂದ ಆರಂಭಿಸಲಾಗುವುದು. ನಗರವನ್ನು 4 ಝೋನ್ ಗಳನ್ನಾಗಿ ಮಾಡಿ, 17 ಸೆಕ್ಟರ್ ಗಳಲ್ಲಿ ವಿಭಾಗಿಸಲಾಗಿದೆ ಎಂದರು. ಯೋಜನೆಯನ್ನು ಪೂರ್ಣಗೊಳಿಸಲು 6 ತಿಂಗಳ ಸಮಯಮಿತಿಯನ್ನು ನಿಗದಿ ಪಡಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಭೂಮಾಪನಾ ಇಲಾಖೆಯ ಉಪನಿರ್ದೇಶಕರಾದ ಬಿ.ಕೆ. ಕುಸುಮಾಧರ್ ಮತ್ತು ನವಯುಗ್ ಸ್ಪೇಷಿಯಲ್ ಟೆಕ್ನಾಲಜಿಸ್ ನ ಪ್ರತಿನಿಧಿಗಳು ಉಪಸ್ಥಿತರಿದ್ದರು.