ಮಂಗಳೂರು,ಏ.1:ಶಿಶು ಮರಣ ಪ್ರಮಾಣದಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಜಾಸ್ತಿ ಎಂದು ಡಾ. ಶಾಂತರಾಂ ಬಾಳಿಗಾ ಅವರು ಹೇಳಿದರು. ಅವರಿಂದು ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 'ಹೆಣ್ಣು ಭ್ರೂಣ ಹತ್ಯೆ'ಕುರಿತ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೆಣ್ಣು ಭ್ರೂಣ ಹತ್ಯೆಗೆ ಪೂರಕವಾಗಿ ಶಿಶು ಮರಣ ಪ್ರಮಾಣವನ್ನು ಅವಲೋಕಿಸಿದಾಗ ಇಲ್ಲೂ ಹೆಣ್ಮಕ್ಕಳ ಸಂಖ್ಯೆ ಅಧಿಕ; ಯಾಕೆಂದರೆ ನವಜಾತ ಶಿಶುವಿಗೆ ಹಾಲುಣಿಸುವಿಕೆಯಿಂದ ಹಿಡಿದು ಹೆಣ್ಣು ಹೆತ್ತ ತಾಯಿಗೆ ಅಪೌಷ್ಠಿಕ ಆಹಾರ ನೀಡುವುದು ಒಂದು ಕಾರಣ ಎಂದು ವಿಶ್ಲೇಷಿಸಿದ ಅವರು, ನಮ್ಮ ಸಾಮಾಜಿಕ ವ್ಯವಸ್ಥೆ ಹೆಣ್ಣೆಂದರೆ ಕೀಳು ಎಂಬ ಭಾವನೆಯಿಂದ ಮುಕ್ತವಾಗಿ ಯೋಚಿಸಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ನುಡಿದರು. ಆರೋಗ್ಯ ಇಲಾಖೆ ಮತ್ತು ಆರೋಗ್ಯ ಕಾರ್ಯಕರ್ತರು ತಾಯಿಯಂದಿರಿಗೆ ಮಕ್ಕಳ ಪೋಷಣೆ ಮತ್ತು ಹಾಲುಣಿಸುವ ಬಗ್ಗೆ ಮಾಹಿತಿಯನ್ನು ನೀಡಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು. ಪ್ರಸ್ತುತ %23ರಷ್ಟು ತಾಯಿಯಂದಿರಿಗೆ ಮಾತ್ರ ಹಾಲುಣಿಸುವ ರೀತಿ ಮತ್ತು ಅಗತ್ಯ ತಿಳಿದಿದೆ ಎಂದರು.
ಹೆಣ್ಣು ಭ್ರೂಣ ಹತ್ಯೆಗೆ ಸಾಮಾಜಿಕ,ಆರ್ಥಿಕ,ಶೈಕ್ಷಣಿಕ ಹಾಗೂ ಕೌಟುಂಬಿಕ ಕಾರಣಗಳ ಕುರಿತು ವಾರ್ತಾಧಿಕಾರಿ ರೋಹಿಣಿ ಮಾತನಾಡಿದರು. ಈ ಕುರಿತು ಸಂಘ ಸಂಸ್ಥೆಗಳ ಪಾತ್ರದ ಕುರಿತು ಪ್ರಜ್ಞಾದ ಹೀಲ್ಡಾ ರಾಯಪ್ಪನ್ ವಿವರಿಸಿದರೆ. ಲೇಡಿಗೋಷನ್ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಪೂರ್ಣಿಮಾ ಅವರು ಹೆಣ್ಣು ಭ್ರೂಣ ಹತ್ಯೆಯ ಸಾಧಕ-ಬಾಧಕಗಳ ಬಗ್ಗೆ ಮಾತನಾಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು ಆರೋಗ್ಯ ಇಲಾಖೆ ಬಾಣಂತಿ ಮತ್ತು ಅಮ್ಮನಿಗೆ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.ಜ್ಞಾನ-ವಿಜ್ಞಾನ ಸಂಸ್ಥೆಯ ನಂದಾ ಪಾಯಸ್ ಅವರು ಈ ಬಗ್ಗೆ ಗುಂಪು ಚರ್ಚೆಯ ನೇತೃತ್ವ ವಹಿಸಿದ್ದರು. ಬಂಟ್ವಾಳ, ಪುತ್ತೂರು, ಶಿರ್ತಾಡಿ,ಕೊಂಪದವು, ಉಳ್ಳಾಲದ ತಾಲೂಕು ಆರೋಗ್ಯಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.ಮಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ರತ್ನಾಕರ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.