Thursday, April 15, 2010
ಭಾರತ ಜನಗಣತಿ 2011- ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಲ್ಪ್ ಸೆಂಟರ್
ಮಂಗಳೂರು, ಏಪ್ರಿಲ್ 15: ಭಾರತ ಜನಗಣತಿ 2011ರ ಪ್ರಯುಕ್ತ ಪ್ರಥಮ ಹಂತದಲ್ಲಿ ಮನೆಪಟ್ಟಿ ತಯಾರಿ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಜನಸಂಖ್ಯಾ ರಿಜಿಸ್ಟರ್ ತಯಾರಿ ಬಗ್ಗೆ ಮಾಹಿತಿ ಸಂಗ್ರಹ ಕಾರ್ಯಕ್ರಮ ಏಪ್ರಿಲ್ 15ರಿಂದ ಜೂನ್ 1ರವರೆಗೆ ನಡೆಯಲಿದ್ದು, ಪ್ರತೀ ಗಣತಿದಾರರ ಬ್ಲಾಕಿಗೆ ನೇಮಕಗೊಂಡ ಗಣತಿದಾರರು ಮನೆ ಮನೆ ಭೇಟಿ ನೀಡಿದಾಗ ಸಾರ್ವಜನಿಕರು ಸ್ಪಷ್ಟ ಮಾಹಿತಿ ನೀಡಬೇಕೆಂದು ಜಿಲ್ಲೆಯ ಪ್ರಧಾನ ಜನಗಣತಿ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ತಿಳಿಸಿದ್ದಾರೆ.ಗಣತಿದಾರರು ಅವರಿಗೆ ವಹಿಸಲಾದ ವಲಯಕ್ಕೆ ಭೇಟಿ ನೀಡದಿದ್ದಲ್ಲಿ, ಗಣತಿ ಕಾರ್ಯದ ಸಂದರ್ಭದಲ್ಲಿ ಕೆಲವು ಮನೆಗಳನ್ನು ಗಣತಿ ಮಾಡದೆ ಬಿಟ್ಟಲ್ಲಿ, ಸಾರ್ವಜನಿಕರಿಂದ ಸಮಗ್ರ ಮಾಹಿತಿ ಪಡೆದು ದಾಖಲಿಸದಿದ್ದಲ್ಲಿ, ಜನಗಣತಿ ಸಿಬ್ಬಂದಿಗೆ ಪಾವತಿ ಮಾಡಬೇಕಾದ ಸಂಭಾವನೆ ಪಾವತಿಸದಿದ್ದಲ್ಲಿ ಮತ್ತು ಗಣತಿ ಕಾರ್ಯದ ಸಮಯದಲ್ಲಿ ಮೇಲ್ವಿಚಾರಕರು ವ್ಯತಿರಿಕ್ತವಾಗಿ ವರ್ತಿಸಿದ್ದಲ್ಲಿ ಸಾರ್ವಜನಿಕರು ಹಾಗೂ ಜನಗಣತಿ ಸಿಬ್ಬಂದಿಗಳು ದೂರು ನೀಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿಯನ್ನು ಸ್ಥಾಪಿಸಲಾಗಿದೆ. ಸಹಾಯವಾಣಿ ಕೇಂದ್ರದ ನಂಬರ್ 1077. ಈ ಸಹಾಯವಾಣಿಯ ಸದುಪಯೋಗವನ್ನು ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.