ಮಂಗಳೂರು,ಏಪ್ರಿಲ್ 24:ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಾಗೂ ಇಲಾಖಾ ಸಮಸ್ಯೆಗಳಿದ್ದರೆ ಅಧಿಕಾರಿಗಳು ಜಿಲ್ಲಾಧಿಕಾರಿಗಳಮೂಲಕ ಅಥವಾ ನೇರವಾಗಿ ತಮ್ಮನ್ನು ಸಂಪರ್ಕಿಸ ಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯ ದರ್ಶಿಗಳಾದ ಬಿ. ಎಸ್.ರಾಮ ಪ್ರಸಾದ್ ಅವರು ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಲಾಖಾ ಧಿಕಾರಿಗಳ ಸಭೆ ನಡೆಸಿ ಜಿಲ್ಲಾ ಅಭಿವೃದ್ಧಿ ಕುರಿತು ಚರ್ಚೆ ನಡೆಸಿ ದರಲ್ಲದೆ, ಮುಂದಿನ ಭೇಟಿ ಸಂದರ್ಭದಲ್ಲಿ ಅಭಿವೃದ್ಧಿ ಕಾಮ ಗಾರಿಗಳನ್ನು ಪರಿಶೀಲಿಸಲು ಸ್ಥಳಕ್ಕೆ ಭೇಟಿ ನೀಡುವುದಾಗಿ ಹೇಳಿದರು.ಅಡಿಷನಲ್ ಎಸ್ ಪಿ ರಮೇಶ್ ಕುಮಾರ್ ಅವರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಲ್ಲಿ ಯಾವುದೇ ಸಮಸ್ಯೆಯಿಲ್ಲ; ಮುಂಬರುವ ಗ್ರಾಮಪಂಚಾಯಿತಿ ಚುನಾವಣೆಗಳಿಗೆ ಸೂಕ್ತ ಸಿದ್ಧತೆಗಳಾಗಿದ್ದು, ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಲ್ಲಿ 12 ಗ್ರಾಮಪಂಚಾಯಿತಿಗಳನ್ನು ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಲಾಗಿದ್ದು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಕ್ರಮಕೈಗೊಳ್ಳಲಾಗಿದೆ ಎಂದರು.ಜಂಟಿ ಕೃಷಿ ನಿರ್ದೇಶಕರಿಂದ ಕೃಷಿ ಇಲಾಖೆ ರೈತರಿಗೆ ಬಿತ್ತನೆ ಬೀಜ ಪೂರೈಕೆ ಇನ್ನಿತರ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಅಭಿವೃದ್ಧಿ ಕೆಲಸಗಳ ಬಗ್ಗೆ ಜಿಲ್ಲಾ ಪಂಚಾಯತ್ ಸಿಇಒ ಶಿವಶಂಕರ್ ಅವರು ಮಾಹಿತಿ ನೀಡಿ ಲಿಂಕ್ ಡಾಕ್ಯುಮೆಂಟ್ ಮುಖಾಂತರ 111ಕೋಟಿ ರೂ.ಗಳು ಅಭಿವೃದ್ಧಿ ಕಾಮಗಾರಿಗೆ ನಿಗದಿಯಾಗಿದ್ದು, 118 ಕೋಟಿ ಜಿಲ್ಲೆಗೆ ದೊರಕಿದೆ. ಇದರಲ್ಲಿ 105.75 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿದ್ದು, ಉಳಿದ ಹಣದಿಂದ ವೇತನ ಪಾವತಿಸಲಾಗಿದೆ ಎಂದರು. ಮಹಾನಗರಪಾಲಿಕೆ ಅಭಿವೃದ್ಧಿ ಕಾಮಗಾರಿಗಳ ಸಮಗ್ರ ಚಿತ್ರಣವನ್ನು ಪಾಲಿಕೆ ಆಯುಕ್ತರಾದ ಕೆ.ಎನ್.ವಿಜಯಪ್ರಕಾಶ್ ಅವರು ನೀಡಿ,ಪ್ರಸಕ್ತ ಸಾಲಿನಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ; ಕೇವಲ 3 ವಾರ್ಡ್ ಗಳಲ್ಲಿ ವಿವಿಧ ಕಾರಣಗಳಿಂದ ಸಮಸ್ಯೆಯಾಗಿದ್ದು, ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು. ಮಹಾನಗರಪಾಲಿಕೆಗೆ ನೀಡಿದ 100 ಕೋಟಿಯಲ್ಲಿ 65 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, 60ಕೋಟಿ 43 ಲಕ್ಷದ ಕಾಮಗಾರಿಗಳು ಸಂಪೂರ್ಣಗೊಂಡಿದೆ ಒಟ್ಟು 251 ಕಾಮಗಾರಿಗಳಲ್ಲಿ 96 ಕಾಮಗಾರಿ ಮುಗಿದಿದ್ದು, ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು. ಸ್ಲಮ್ ಸಮೀಕ್ಷೆ ಮುಗಿಸಿದ ಪ್ರಥಮ ಮಹಾನಗರಪಾಲಿಕೆ ಮಂಗಳೂರಾಗಿದ್ದು, ನಗರದಲ್ಲಿ 21 ಸ್ಲಮ್ ಪ್ರದೇಶಗಳೆಂದು ಗುರುತಿಸಲಾಗಿದೆ. ಇದರಲ್ಲಿ 9 ಅಧಿಕೃತ ಸ್ಲಮ್ ಏರಿಯಾವಾಗಿದ್ದು, 1,776 ಮನೆಗಳಿದ್ದು, 8,880 ಜನಸಂಖ್ಯೆಯಿದೆ. ಮಂಗಳೂರು ವನ್ ಯೋಜನೆಗೆ ನಗರಪಾಲಿಕೆಯಿಂದಾಗಬೇಕಿದ್ದ ಕೆಲಸಗಳನ್ನು ಸಂಪೂರ್ಣಗೊಳಿಸಲಾಗಿದೆ ಎಂದರು.ಬಿಸಿಯೂಟ, ಸೈಕಲ್ ವಿತರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಂಡರಲ್ಲದೆ, ಅಂಗನವಾಡಿ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಎನ್ ಎಚ್ 17 ಕಾಮಗಾರಿ ಪ್ರಗತಿ ಬಗ್ಗೆ ಸುದೀರ್ಘ ಚರ್ಚೆ ಸಭೆಯಲ್ಲಿ ನಡೆಯಿತು. ಶಿರಾಡಿಘಾಟ್ ಅಭಿವೃದ್ಧಿ ಎನ್ ಎಚ್ 48,ತೊಕ್ಕೊಟ್ಟ-ತಲಪಾಡಿ ರಸ್ತೆ, ಎನ್ ಎಚ್ 13 ಕಾಮಗಾರಿ ಕೆಲಸಗಳನ್ನು ಶೀಘ್ರವಾಗಿ ಮುಗಿಸಬೇಕೆಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೈಕಂಪಾಡಿ ಕಲುಷಿತ ಪ್ರದೇಶವೆಂದು ಗುರುತಿಸಲಾಗಿದ್ದು, ಈಬಗ್ಗೆ ಮೂರನೇಯವರಿಂದ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಅವರು ಹೇಳಿದರು.ಅಕ್ರಮ ಮರಳು ಸಾಗಾಣಿಕೆ ಸಮಸ್ಯೆ ಮತ್ತು ಸವಾಲುಗಳ ಬಗ್ಗೆಯೂ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಉಪಸ್ಥಿತರಿದ್ದರು.