ಮಂಗಳೂರು,ಮಾರ್ಚ್ 3:ರಾಜ್ಯ ಎದುರಿಸುತ್ತಿರುವ ವಿದ್ಯುತ್ ಕ್ಷಾಮ ನಿವಾರಣೆಗೆ ವಿದ್ಯುತ್ ಕಾಯಿದೆ 2003ರ ಸೆಕ್ಷನ್11 ರಡಿ ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳಿಂದ ಉತ್ಪಾದಿಸಲ್ಪಡುವ ವಿದ್ಯುಚ್ಛಕ್ತಿಯನ್ನು ಹೊರ ರಾಜ್ಯಗಳಿಗೆ ಮಾರಾಟ ಮಾಡದಂತೆ ನಿರ್ಬಂಧ ಹೇರಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿದರು.
ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಸನ್ನಿಧಿಯಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿ, ಇದರಿಂದಾಗಿ ರಾಜ್ಯಕ್ಕೆ ಅಂದಾಜು 500ರಿಂದ 600 ಮೆಗಾವ್ಯಾಟ್ ವಿದ್ಯುಚ್ಛಕ್ತಿ ದೊರೆಯಲಿದ್ದು, ವಿದ್ಯುತ್ ಅಭಾವ ನೀಗಿಸಲು ನೆರವಾಗಲಿದೆ ಎಂದರು. ರಾಜ್ಯ ಎದುರಿಸುತ್ತಿರುವ ವಿದ್ಯುತ್ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಏಪ್ರಿಲ್ 5ರಂದು ಹಿರಿಯ ಅಧಿಕಾರಿಗಳ ಸಭೆ ಕರೆಯುವುದಾಗಿ ಹೇಳಿದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2008-09 ನೇ ಸಾಲಿನಲ್ಲಿ 350 ಕೋಟಿ ರೂ. ,2009-10ನೇ ಸಾಲಿನಲ್ಲಿ 2,350 ಕೋಟಿ ಸದ್ಬಳಕೆ ಯಾಗಿದ್ದು, ಈ ಅಭಿವೃದ್ಧಿಯನ್ನು ಕೇಂದ್ರಸರ್ಕಾರ ಶ್ಲಾಘಿಸಿದ್ದು, 10-11 ನೇ ಸಾಲಿಗೆ 4,600 ಕೋಟಿ ರೂ., ಬಿಡುಗಡೆ ಮಾಡಿದೆ ಎಂದರು. ಜೂನ್ ತಿಂಗಳಲ್ಲಿ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, ಈ ಸಂಬಂಧ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದಲ್ಲದೆ, ಹೊಸ ಉದ್ಯಮಗಳಿಂದ ಕೈಗಾರಿಕೆಗಳ ಅಭಿವೃದ್ಧಿ ಮತ್ತು ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ ಎಂದು ಹೇಳಿದರು. ಮಂಗಳೂರಿನಲ್ಲಿ ಕಂದಾಯ ಇಲಾಖೆ ಜಾರಿಗೆ ತಂದಿರುವ ಪಡಸಾಲೆ ಯೋಜನೆ ಯಶಸ್ವಿಯಾಗಿದ್ದು, ಒಂದೇ ಸೂರಿನಡಿ ವಿವಿಧ ಸೇವೆ ಒದಗಿಸುವ ಉತ್ತಮ ಯೋಜನೆಯನ್ನು ಇತರ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಶಾಸಕ ಎನ್. ಯೋಗಿಶ್ ಭಟ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಸಹಾಯಕ ದಂಡಾಧಿಕಾರಿ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು.