ಮಂಗಳೂರು,ಮಾರ್ಚ್ 2: ರಾಜ್ಯದಲ್ಲಿ ಶೀಘ್ರದಲ್ಲೇ ನಡೆಯುವ ಗ್ರಾಮ ಪಂಚಾಯ್ತಿ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರು ಕಂದಾಯ ವಿಭಾಗದ ಎಂಟು ಜಿಲ್ಲೆಗಳಲ್ಲಿ ನಡೆದಿರುವ ಸಿದ್ದತೆಗಳಲ್ಲಿ ದಕ್ಷಿಣ ಕನ್ನಡದ ಕುರಿತು ಮಾಹಿತಿಗಳು ಇಂತಿವೆ.
ದಕ್ಷಿಣ ಕನ್ನಡ ಜಿಲ್ಲೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳಿಗಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿನ ಒಟ್ಟು ಜನಸಂಖ್ಯೆ 12,69,858 ಆಗಿದೆ. ಜಿಲ್ಲೆಯಲ್ಲಿ ಒಟ್ಟಾರೆ 203 ಗ್ರಾಮ ಪಂಚಾಯಿತಿಗಳಿದ್ದು 3275 ಗ್ರಾಮ ಪಂಚಾಯಿತಿಯ ಒಟ್ಟು ಸದಸ್ಯ ಸ್ಥಾನಗಳು ಲಭ್ಯವಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗೆ ಒಟ್ಟು 9,47,131 ಮತದಾರರಿದ್ದು, ತಾಲ್ಲೂಕುವಾರು ಮತದಾರರ ವಿವರ ಇಂತಿದೆ: ಮಂಗಳೂರು - 2,58,519, ಬಂಟ್ವಾಳ - 2,67,521, ಬೆಳ್ತಂಗಡಿ - 1,78,202, ಪುತ್ತೂರು - 1,55,826 ಹಾಗೂ ಸುಳ್ಯ - 87,063.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,112 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಅದರಲ್ಲಿ 397 ಸೂಕ್ಷ್ಮ ಮತಗಟ್ಟೆಗಳು ಹಾಗೂ 224 ಅತಿ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಗ್ರಾಮ ಪಂಚಾಯಿತಿ ಚುನಾವಣೆಗಳಿಗಾಗಿ 200 ಚುನಾವಣಾಧಿಕಾರಿಗಳು ಹಾಗೂ 210 ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗುತ್ತಿದೆ. 3833 ಮತಪೆಟ್ಟಿಗೆಗಳು ಲಭ್ಯವಿದ್ದು ಅದರಲ್ಲಿ 2530 ಮತಪೆಟ್ಟಿಗೆಗಳು ಸುಸ್ಥಿತಿಯಲ್ಲಿದ್ದು ಚುನಾವಣೆಗೆ ಲಭ್ಯವಿದೆ. ಪ್ರತೀ 15 ಗ್ರಾಮ ಪಂಚಾಯಿತಿಗೆ ಒಬ್ಬರಂತೆ 14 ಮಂದಿ ಚುನಾವಣಾ ವೀಕ್ಷಕರನ್ನು ನೇಮಿಸಲು ಉದ್ದೇಶಿಸಲಾಗಿದೆ.