ಮಂಗಳೂರು,ಮಾರ್ಚ್ 10: ದಕ್ಷಿಣ ಕನ್ನಡ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಕಳೆದ ಒಂದು ವರ್ಷಗಳಲ್ಲಿ ಬಾಕಿ ಉಳದಿದ್ದ 500 ಹೊಸ ಬಸ್ ರೂಟ್ ಗಳು ಸೇರಿದಂತೆ 141 ಅರ್ಜಿಗಳ ವಿಚಾರಣೆ ನಡೆಯಿತು. ಆದರೆ ಹೈಕೋರ್ಟ್ ತಡೆಯಾಜ್ಞೆ ಕಾರಣ ಸಮಸ್ಯೆ ಪರಿಹಾರಕ್ಕೆ ಸೂಕ್ತ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಹೇಳಿದರು.
ದಿನಪೂರ್ತಿ ಈ ಸಂಬಂಧ ಇಂದು ನಡೆದ ಕಲಾಪದ ಬಳಿಕ ಪತ್ರಿಕಾ ಗೋಷ್ಥಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಸೇರಿದಂತೆ ಖಾಸಗಿ ಬಸ್ ಮಾಲಕರು ಕೋರಿದ್ದ ಹಳೆ ರೂಟ್ ಬದಲಾವಣೆ ಹಾಗೂ ಹೊಸ ರೂಟ್ ಗಳಿಗೆ ಅರ್ಜಿ ಸಲ್ಲಿಸಿದ್ದು ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರು. ಪಂಪ್ ವೆಲ್ ಬಳಿ ಆದಷ್ಟು ಶೀಘ್ರವಾಗಿ ನೂತನ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ಏಳೂವರೆ ಎಕರೆ ಭೂಮಿ ವಶಪಡಿಸಿ ಕೊಳ್ಳಲಾಗಿದ್ದು, ಬಸ್ ನಿಲ್ದಾಣ ಸ್ಥಳಾಂತರದಿಂದ ಈ ಎಲ್ಲ ಸಮಸ್ಯೆಗಳಿಗೊಂದು ಪರಿಹಾರ ಕಾಣಲು ಸಾಧ್ಯ ಎಂದ ಜಿಲ್ಲಾಧಿಕಾರಿಗಳು, ಮುಂದಿನ ಹಂತವಾಗಿ 11 ಎಕರೆಯಷ್ಟು ಜಮೀನು ವಶಪಡಿಸಿಕೊಂಡು ಸಾರಿಗೆ ಸಮುಚ್ಛಯ (transportation hub)ನಿರ್ಮಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು. ಈ ಎಲ್ಲ ಪ್ರಕ್ರಿಯೆಗಳಿಗೆ ಜಿಲ್ಲಾಡಳಿತಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರ ನೆರವಿನ ಅಗತ್ಯವನ್ನು ಪ್ರತಿಪಾದಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಎಸ್ ರಾವ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತ ಮ ಉಪಸ್ಥಿತರಿದ್ದರು.