Saturday, March 13, 2010

ಪಿಲಿಕುಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 3 ಕೋಟಿ, ಜಂಗಲ್ ರಿಸಾರ್ಟ್ ಗೆ ಪ್ರವಾಸೋದ್ಯಮ ಸಚಿವರಿಂದ ಚಾಲನೆ

ಮಂಗಳೂರು, ಮಾ.13 (ಕರ್ನಾಟಕ ವಾರ್ತೆ)- ಪಿಲಿಕುಳ ನಿಸರ್ಗಧಾಮದಲ್ಲಿ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ 9 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಎಂಟು ಕೊಠಡಿಗಳ ಪ್ರವಾಸಿ ಮಂದಿರಗಳನ್ನು ಪ್ರವಾಸೋದ್ಯಮ ಸಚಿವರಾದ ಜನಾರ್ಧನ ರೆಡ್ಡಿ ಅವರು ಉದ್ಘಾಟಿಸಿದರು.
ಇಂದು ಮಂಗಳೂರಿನ ಪಿಲಿಕುಳ ನಿಸರ್ಗ ಧಾಮದಲ್ಲಿ ಹಲವು ಅಭಿವೃಧ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಸಚಿವರು, 45 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ 2 ಸೂಟ್ ಕೊಠಡಿಗಳನ್ನು ಹೊಂದಿದ ಒಟ್ಟು 8 ಕೊಠಡಿಗಳಿಗೆ ಚಾಲನೆ ನೀಡಿದರು.ಪ್ರವಾಸೋದ್ಯಮಕ್ಕ ಪೂರಕವಾಗಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 4.23 ರೂ.ಗಳ ಹೊಸ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಿದೆ. ಜಂಗಲ್ ರಿಸಾರ್ಟ್ ನಲ್ಲಿ ಪ್ಯಾಕೇಜ್ ಟೂರ್ ಗೆ ವ್ಯವಸ್ಥೆ ಮಾಡಲಾಗಿದ್ದು, ಇದರಡಿ ಮೂಡುಬಿದರೆ ಅರಣ್ಯಕ್ಕೆ ಭೇಟಿ,ಪಕ್ಷಿ ವೀಕ್ಷಣೆ ಮತ್ತು ಅಧ್ಯಯನ ಹಾಗೂ ಪರಿಸರ ವೀಕ್ಷಣೆ, ಕುದುರೆಮುಖ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ,ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ,ಸಮುದ್ರ ತೀರಕ್ಕೆ ಭೇಟಿ,ಆಯುರ್ವೇದ ಆರೋಗ್ಯ ಚಿಕಿತ್ಸೆ, ಶಿವರಾಮ ಕಾರಂತ ಮೃಗಾಲಯ ವೀಕ್ಷಣೆ, ಬಟಾನಿಕಲ್ ಗಾರ್ಡನ್, ದೋಣಿ ವಿಹಾರ, ವಾಟರ್ ಪಾರ್ಕ, ಪುರಾತನ ವಸತಿಗೃಹ ವೀಕ್ಷಣೆ, ಸಮೀಪದ ದೇವಸ್ಥಾನ, ಸೈಂಟ್ ಅಲೋಷಿಯಸ್ ಮತ್ತು ಮ್ಯೂಸಿಯಂ ಭೇಟಿ ಒಳಗೊಂಡಿದೆ ಎಂದು ಸಚಿವರು ವಿವರಿಸಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ಸಚಿವರು, ಪಿಲಿಕುಳದ ಸಂಸ್ಕೃತಿ ಗ್ರಾಮ, ವನ್ಯಜೀವಿ ಸಂರಕ್ಷಣೆ ಮತ್ತು ಕ್ರೀಡೆಯ ಅಭಿವೃದ್ಧಿಗೆ 3 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದರು. ಕಾಳಿಂಗ ಸರ್ಪಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಹಮ್ಮಿಕೊಂಡ ಬಗ್ಗೆ ಹಾಗೂ ಈ ಸಂಬಂಧ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿ ದೊರಕಿದ ಬಗ್ಗೆ ಮಾಹಿತಿ ನೀಡಿದರು.
ರಾಜ್ಯದಲ್ಲಿ ಹೆಲಿಟೂರಿಸಂ ಅಭಿವೃದ್ಧಿ ಬಗ್ಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಏಪ್ರಿಲ್ ಮೊದಲ ವಾರದಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು. ಹಂಪಿ,ಮೈಸೂರು ಮತ್ತು ಮಂಗಳೂರಿನಿಂದ ಹೆಲಿಕಾಪ್ಟರ್ ಸೇವೆಗೆ ಸೌಕರ್ಯ ಒದಗಿಸಲಾಗುವುದು. ಪ್ರವಾಸೋದ್ಯಮ ಅಭಿವೃದ್ಧಿಯಡಿ ಎಸ್ ಸಿ ಎಸ್ ಟಿ ಯುವಕರಿಗೆ ಟ್ಯಾಕ್ಸಿ ಖರೀದಿಸಲು ಶೇಕಡ 50 ರಷ್ಟು ಸಬ್ಸಿಡಿ ನೀಡಲಾಗುವುದು. ಬಳ್ಳಾರಿ ಮತ್ತು ಮಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಪ್ ಹೊಟೆಲ್ ಮ್ಯಾನೇಜ್ ಮೆಂಟ್ ಸಂಸ್ಥೆಗಳನ್ನು ತೆರೆಯಲಾಗುವುದು. ಖಾಸಗಿ ಮತ್ತು ಸರಕಾರದ ಸಹಯೋಗದಲ್ಲೇ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು; ಇದಕ್ಕೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು, ಯೋಜನೆಗಳೆಲ್ಲವೂ ಶೀಘ್ರವೇ ಅನುಷ್ಠಾನಕ್ಕೆ ಬರಲಿದೆ ಎಂದರು.
ಬೆಂಗಳೂರಿನ ಬನ್ನೇರುಘಟ್ಟ ಪಾರ್ಕ್ ನಲ್ಲಿ ರಾತ್ರಿ ಸಫಾರಿಯನ್ನು ಸಿಂಗಾಪೂರ ಮಾದರಿಯಲ್ಲೇ ಅಭಿವೃದ್ಧಿ ಪಡಿಸುವುದಾಗಿ ಹೇಳಿದರು. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್, ಶಾಸಕರಾದ ಯೊಗೀಶ್ ಭಟ್,ಅಭಯ ಚಂದ್ರ ಜೈನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ವಿ. ಪೊನ್ನುರಾಜ್, ಮೇಯರ್ ರಜನಿದುಗ್ಗಣ್ಣ ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.