ಮಂಗಳೂರು, ಮಾರ್ಚ್, 12: (ಕರ್ನಾಟಕ ವಾರ್ತೆ)- ಸ್ತ್ರೀ ಶಕ್ತಿಯು ಸಂಘಟಿತ ಶಕ್ತಿಯಾಗಿ ರೂಪು ಗೊಂಡಿದ್ದು, ಈ ಸಂಘಟನೆ ಸಾಮಾಜಿಕ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಶಾಲಾ ಸಂಚಾಲಕರಾದ ರೆ.ಫಾದರ್ ಮಥಾಯಿಸ್ ಪಿರೇರಾ ಹೇಳಿದರು.
ಇಂದು ವಾರ್ತಾ ಇಲಾಖೆ, ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ಇಲಾಖೆ, ಮತ್ತು ಮಂಗಳೂರಿನ ಶ್ರೀದೇವಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಬಜಪೆ ಹಿರಿಯ ಪ್ರಾಥಮಿಕ ಶಾಲೆ ಪೆರೋಕಿಯಲ್ ನಲ್ಲಿ ಏರ್ಪಡಿಸಲಾದ ಮಹಿಳೆ ಮತ್ತು ಕಾನೂನು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಮಹಿಳಾ ಸಂಘಟನೆಗಳು ಸಾಮಾಜಿಕವಾಗಿ ಇನ್ನಷ್ಟು ಪ್ರಭಾವ ಬೀರಲು ಎಲ್ಲ ರೀತಿಯ ಮಾಹಿತಿಗಳನ್ನು ಕಲೆ ಹಾಕಿ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಈಗಾಗಲೇ ಆಡಳಿತದಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ರಾಜ್ಯಸಭೆಯಲ್ಲಿ ಬಿಲ್ಲು ಪಾಸಾಗಿದ್ದು ಶ್ಲಾಘನೀಯ; ಜಾಗೃತ ಮಹಿಳೆಯಿಂದ ಜಾಗೃತ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.ಸಂಕಿರಣದಲ್ಲಿ ಉಪನ್ಯಾಸ ನೀಡಿದ ಕ್ಷೇತ್ರ ಪ್ರಚಾರಾ ಧಿಕಾರಿ ಶ್ರೀನಿವಾಸ್ ಅವರು ಮಹಿಳಾ ಸಬಲೀಕರಣಕ್ಕೆ ದೇಶದಲ್ಲಿ ಬಹಳಷ್ಟು ಕಾನೂನುಗಳು ಜಾರಿಯಾಗಿದ್ದು, ಈ ಬಗ್ಗೆ ಶೇಕಡ 80ರಷ್ಟು ಮಹಿಳೆಯರಿಗೆ ಮಾಹಿತಿ ಇಲ್ಲ. ಸಂವಿಧಾನ ಬದ್ಧ ಹಕ್ಕುಗಳ ಜಾರಿ ನಾವು ನಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಮಾತ್ರ ಸಾಧ್ಯ. ಹಲವು ಒತ್ತಡಗಳ ನಡುವೆ ಬಾಳಬೇಕಾದ ಮಹಿಳೆಯರು ಅಭಿವೃದ್ಧಿಯತ್ತ ಸಾಗಲು ಕಾನೂನಿನ ಬಗ್ಗೆ ತಮ್ಮ ಸುತ್ತಮುತ್ತಲಲ್ಲಿ ಆಗುವ ಬದಲಾವಣೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳುವುದರಿಂದ ಮಾತ್ರ ಸಾಧ್ಯ ಎಂದರು. ಲಿಂಗ ತಾರತಮ್ಯವನ್ನು ನಿವಾರಣೆಯಲ್ಲಿ ಮಹಿಳೆಯರ ಹೊಣೆಯ ಬಗ್ಗೆ ವಿವರಿಸಿದ ಅವರು, ತಳಮಟ್ಟದಿಂದ ಅಂದರೆ ಪಂಚಾಯತ್ ವ್ಯವಸ್ಥೆಯ ಮೂಲಕ ಮಹಿಳೆಯರು ಸಕ್ರಿಯವಾಗಿ ಸಾಮಾಜಿಕ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವ ಬಗೆಯನ್ನು ವಿವರಿಸಿದರು. ಮಹಿಳಾ ಧ್ವನಿಯ ಶಕ್ತಿಯ ಬಗ್ಗೆ ಹೇಳಿದರು.
ಮುಖ್ಯ ಅತಿಥಿಗಳಾಗಿ ಶ್ರೀದೇವಿ ಕಾಲೇಜಿನ ಪ್ರಾಂಶುಪಾಲರಾದ ಯೂನಿಸ್ ರೇಗೊ, ಮುಖ್ಯೋಪಾಧ್ಯಾಯ ರಾದ ಕೋಸೆಸ್ ಡಿಸೋಜ, ಗ್ರಾಮಪಂಚಾಯಿತಿ ಸದಸ್ಯರಾದ ಸುಮಾ ಅವರು ಪಾಲ್ಗೊಂಡಿದ್ದರು. ಬಜಪೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಹರಿಣಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀದೇವಿ ಕಾಲೇಜಿನ ಎಂಎಸ್ ಡಬ್ಲ್ಯೂವಿನ ವಿದ್ಯಾರ್ಥಿನಿ ಪುಷ್ಪಲತ ಕಾರ್ಯಕ್ರಮ ನಿರ್ವಹಿಸಿದರು. ಪ್ರವೀಣ್ ವಂದಿಸಿದರು. ಕ್ಷೇತ್ರ ಪ್ರಚಾರ ಇಲಾಖೆ ವತಿಯಿಂದ ಮಹಿಳೆ ಮತ್ತು ಕಾನೂನು ಕುರಿತು ಚಿತ್ರಪ್ರದರ್ಶನ ಏರ್ಪಡಿಸಲಾಗಿತ್ತು.