ಸಿನೆಮಾ ರೀಲುಗಳೊಂದಿಗೆ ಗುಂಡಿಬೈಲು ಶ್ರೀನಿವಾಸ್ ಅವರ ಒಡನಾಟ ಆರಂಭವಾದುದು 1971ರಲ್ಲಿ. ಪಿಯುಸಿ ಬಳಿಕ ಉಡುಪಿಯ ಕಲ್ಪಾನಾ ಟಾಕೀಸ್ನಲ್ಲಿ ಅವರ ಉದ್ಯೋಗ ಶುರು. ನಂತರ ಅವರು ಸೇರಿದ್ದು ಕ್ಷೇತ್ರ ಪ್ರಚಾರ ನಿರ್ದೇಶನಾಲಯವನ್ನು. ಅಲ್ಲಿ ಪ್ರೊಜೆಕ್ಟರನ್ನು ಬೆನ್ನಿಗಂಟಿಸಿಕೊಂಡೆ ಅವರು ಹಳ್ಳಿಹಳ್ಳಿ ಸುತ್ತಿದರು; ಜನತೆಗೆ ಮಾಹಿತಿ, ಮನರಂಜನೆಯ ರಸಪಾಕ ಉಣಬಡಿಸಿದರು.
ಬೇಸಿಗೆಯ ಧಗೆಯಿರಲಿ, ಧೋ ಮಳೆಯಿರಲಿ, ಥರಗುಟ್ಟುವ ಚಳಿಯಿರಲಿ ಶ್ರೀನಿವಾಸ್ ಅವರ ಶ್ರದ್ಧೆ, ಕಾಳಜಿ, ಉತ್ಸಾಹ ಎಂದಿಗೂ ಏರುಗತಿಯಲ್ಲೆ. ಹೃದಯ ಶಸ್ತ್ರಚಿಕಿತ್ಸೆಯ ಬಳಿಕವೂ ಅವರಲ್ಲಿ ಅದೇ ಕಾಯಕ ಪ್ರೇಮ. ಅವರ ಪಾಲಿಗೆ ಒಂದೊಂದು ಕಾರ್ಯಕ್ರಮವೂ ಮುಖ್ಯ; ಪ್ರತಿಯೊಂದು ರೀಲು ಕೂಡ ಅತ್ಯಮೂಲ್ಯ. ರೀಲುಗಳ ಮೂಲಕ ಸರಕಾರದ ವಿಚಾರಗಳನ್ನು ಜನತೆಗೆ ತಿಳಿಸಬೇಕು; ಜನರ ಆಸಕ್ತಿಗೂ ಸ್ಪಂದಿಸಬೇಕು. ಮಕ್ಕಳಿಗಾದರೆ ಮನರಂಜನೆ ಬೇಕೇ ಬೇಕು. ಕಂಬಾರರ `ಮಳೆರಾಯ ಅಚ್ಚುಮೆಚ್ಚು. ಹಳ್ಳಿ ಮಂದಿಗೆ ಸಣ್ಣ ಚಿತ್ರಗಳಿಗಿಂತ ಎರಡು ತಾಸಿನ ತುಕ್ರನ ಕಥೆ, ಮೊದಲ ಹೆಜ್ಜೆ ಮುಂತಾದ ಪಿಚ್ಚರೇ ಇಷ್ಟ. ಪೇಟೆ ಜನಕ್ಕೆ ತುಸು ಮಸಾಲೆ ಇದ್ದರೆ ಚೆನ್ನ. ಹೀಗೆ ಥರಾವರಿ ಸಮುದಾಯ, ಸನ್ನಿವೇಶಕ್ಕೆ ತಕ್ಕಂತೆ ಶ್ರೀನಿವಾಸ್ ರೀಲುಗಳ ಪ್ಯಾಕೇಜ್ ರೂಪಿಸುತ್ತಿದ್ದರು. ಅವರು ಜೀಪು ಹತ್ತಿದರೆಂದರೆ ಅವರೊಂದಿಗೆ ಎರಡು ಟರ್ಪಲಿನ ಬ್ಯಾಗುಗಳ ತುಂಬ ನೂರಾರು ರೀಲುಗಳೂ ಪ್ರವಾಸ ಹೊರಡುತ್ತಿದ್ದವು. ಸಣ್ಣ ಡಬ್ಬಿಯಲ್ಲಿ ಸಣ್ಣ ಚಿತ್ರ, ದೊಡ್ಡ ಡಬ್ಬದಲ್ಲಿ ದೊಡ್ಡ ಚಿತ್ರ. ಶ್ರೀನಿವಾಸ್ ದೊಡ್ಡದೊಡ್ಡ ಡಬ್ಬಗಳನ್ನು ಹಿಡಿದು ಜೀಪಿನಿಂದ ಇಳಿದರೆ ಮಕ್ಕಳಿಗೆ ಖುಷಿಯೋ ಖುಷಿ. ರೀಲು ತುಂಡಾದರೆ, ಅದರ ಅಂಚು ಹರಿದರೆ ಅದಕ್ಕೆ ಅಂಟು ಹಚ್ಚಿ ಸ್ಪ್ಲೈಸರ್ಗೆ ಅಳವಡಿಸಿ ಮತ್ತೆ ರೀಲಿಗೆ ಜೀವ ತುಂಬುವುದು ಶ್ರೀನಿವಾಸ್ ಅವರ ನಿತ್ಯದ ಕೆಲಸ. ಒಮ್ಮೆ ತೋರಿಸಿದ ರೀಲನ್ನು ಮತ್ತೆ ಪ್ರದರ್ಶಿಸಬೇಕಿದ್ದರೆ ಅದನ್ನು ಚರಕದಂತಿರುವ ರಿವೈಂಡರ್ ಗೆ ಹಾಕಿ ಹಿಂದಕ್ಕೆ ಸುತ್ತಿ ಅಣಿಗೊಳಿಸಬೇಕು. ಆಗಲೇ ಅದರ ಅಂಚು ಹರಿದಿದೆಯೋ ಎಂಬುದನ್ನೂ ಪರೀಕ್ಷಿಸಬೇಕು. ಬೆಳ್ಳಂಬೆಳಗ್ಗೆ ಪ್ರವಾಸಿ ಬಂಗಲೆಯ ವರಾಂಡದಲ್ಲಿ ಕುಳಿತು ಶ್ರೀನಿವಾಸ್ ಹಿಂದಿನ ರಾತ್ರಿ ತೋರಿಸಿದ್ದ ರೀಲುಗಳನ್ನೆಲ್ಲ ಒಂದೊಂದಾಗಿ ತೆಗೆದು ರಿವೈಂಡರ್ಗೆ ಹಾಕಿ ಒಂದು ಕೈಯಲ್ಲಿ ಅದರ ಹಿಡಿಯನ್ನು ಗಿರಗಿರನೆ ತಿರುಗಿಸುತ್ತ ಇನ್ನೊಂದು ಕೈಯಲ್ಲಿ ರೀಲುಗಳ ಆರೋಗ್ಯ ಪರೀಕ್ಷಿಸುತ್ತ ತಾದಾತ್ಮ್ಯದಲ್ಲಿ ಅದನ್ನು ಸುತ್ತಿಡುತ್ತಿದ್ದ ದೃಶ್ಯದ ನೆನಪು ಸದಾ ಹಸಿರು.
ಶ್ರೀನಿವಾಸ್ ಎಂದೊಡನೆ ಅವರನ್ನು ಬಲ್ಲ ಎಲ್ಲರ ಮನಸ್ಸಿನಲ್ಲೂ ನೆನಪಿನ ರೀಲುಗಳು ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ನಡುರಾತ್ರಿಯಲ್ಲಿ ಜೀಪು ತಳ್ಳಿದ್ದು, ಕಾರ್ಯಕ್ರಮ ಸಿದ್ಧತೆಗೆ ಅವರು ಎಲ್ಲರಿಗಿಂತ ಮೊದಲೇ ಬಂದು ಕಸ ಗುಡಿಸುತ್ತಿದ್ದುದು, ಹಾಡಿಯ ಹಾದಿಯಲ್ಲಿ ಕಾಡಾನೆಗಳ ಹಿಂಡು ಎದುರಾದದ್ದು, ಕೇವಲ ಐದುನೂರು ರೂಪಾಯಿಯಲ್ಲಿ ನೂರಾರು ಮಂದಿಗೆ ಶಿರಾ-ಉಪ್ಪಿಟ್ಟು ವ್ಯವಸ್ಥೆಮಾಡಿದ್ದು... ಹೀಗೆ ಶ್ರೀನಿವಾಸ್ ಒಡನಾಟದ ನೆನಪು ಎಂದಿಗೂ ಮುಗಿಯದ ರೀಲು. ಶ್ರೀನಿವಾಸ್ ಅವರಿಗೂ ರೀಲುಗಳ ನೆನಪು ಎಂದೆಂದಿಗೂ ಮರೆಯಲಾಗದ್ದು. ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ರೀಲುಗಳೊಂದಿಗೆ ಬದುಕಿದವರು; ಅವುಗಳನ್ನು ಅತೀವವಾಗಿ ಪ್ರೀತಿಸಿದವರು; ಧ್ಯಾನಿಸಿದವರು. ರೀಲುಗಳ ಮೂಲಕವೇ ಸಮಾಜದ ಜತೆ ಮಾತನಾಡಿದವರು. ಆ ಕೆಲಸಕ್ಕಾಗಿಯೇ ಜನಮೆಚ್ಚುಗೆ ಗಳಿಸಿದವರು.
ಶುಭ ಹಾರೈಕೆಗಳೊಂದಿಗೆ, ವಾರ್ತಾ ಇಲಾಖೆ ಮಂಗಳೂರು
(ಸಂಗ್ರಹ: ಶಿವರಾಂಪೈಲೂರು ಅವರ ಪುಸ್ತಕದಿಂದ)