ಮಂಗಳೂರು,ಮಾರ್ಚ್,26 :ಎಚ್ ಐ ವಿ/ ಏಡ್ಸ್ ರೋಗ ಮೊತ್ತ ಮೊದಲ ಬಾರಿಗೆ ಅಮೆರಿಕಾದಲ್ಲಿ ವರದಿಯಾದಾಗ ಈ ಮಾರಕ ರೋಗ ಭಾರತದಲ್ಲಿ ಕಂಡುಬರಲು ಸಾಧ್ಯವಿಲ್ಲ ಎಂದೇ ಬಿಂಬಿಸಲಾಯಿತು. ಆದರೆ 1986ರಲ್ಲಿ ಚೆನ್ನೈನ ವೆಲ್ಲೂರಿನಲ್ಲಿ ಎಚ್ ಐ ವಿ ಪಾಸಿಟಿವ್ ಪ್ರಕರಣ ಪತ್ತೆಯಾಯಿತು. ಅದೇ ವರ್ಷ ಮುಂಬಯಿಯಲ್ಲಿ ಏಡ್ಸ್ ಪತ್ತೆಯಾಯಿತು. 1987ರಲ್ಲಿ ಬೆಳಗಾಂವ್ ನಲ್ಲಿ ಏಡ್ಸ್ ಪತ್ತೆಯಾಯಿತು. ನಂತರ ಏಡ್ಸ್ ರೋಗ ನಮ್ಮ ಸುತ್ತಮುತ್ತಲೇ ವರದಿಯಾಗತೊಡಗಿದಾಗ ರೋಗದ ಬಗ್ಗೆ ಅರಿವು ಮೂಡಿಸುವ ಹಾಗೂ ರೋಗ ನಿಯಂತ್ರಣಕ್ಕೆ ದೇಶದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳ ಲಾಯಿತು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ. ಕಿಶೋರ್ ಕುಮಾರ್ ಅವರು ಮಾಹಿತಿ ನೀಡಿದರು.
ಇಂದು ಏಡ್ಸ್ ಬಗ್ಗೆ ನಗರ ಪ್ರದೇಶಗಳಲ್ಲಿ ಸಾಕಷ್ಟು ಮಾಹಿತಿ ಯಿದ್ದರೂ, ಗ್ರಾಮೀಣರಲ್ಲಿ ಅದರಲ್ಲೂ ಪ್ರಮುಖವಾಗಿ ಬುಡಕಟ್ಟು ಜನಾಂಗದ ಆದಿವಾಸಿಗಳಿಗೆ (ಟ್ರೈಬಲ್ಸ್) ಈ ಸಂಬಂಧ ಹೆಚ್ಚಿನ ಮಾಹಿತಿ ನೀಡುವ ಬಗ್ಗೆ ಕಾರ್ಯಯೋಜನೆ ರೂಪಿಸಲು ಇಂದು ರಾಜ್ಯ ಏಡ್ಸ್ ನಿಯಂತ್ರಣ ಘಟಕ ವೆನ್ ಲಾಕ್ ನ ಮಕ್ಕಳ ಚಿಕಿತ್ಸಾ ಘಟಕದಲ್ಲಿ ಸೆಮಿನಾರ್ ಹಾಲ್ ನಲ್ಲಿ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮತ್ತು ಎನ್ ಜಿ ಒ ಗಳಿಗೆ ಕಾರ್ಯಗಾರ ಹಮ್ಮಿಕೊಂಡಿತ್ತು. ಕಾರ್ಯಗಾರದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಡಾ. ಕಿಶೋರ್ ಅವರು, ಆರಿಸಿದ ಟಾರ್ಗೆಟ್ ಗ್ರೂಪ್ ಮತ್ತು ಕ್ರಿಯಾಯೋಜನೆ ಪೂರ್ವ ತಯಾರಿ ಬಗ್ಗೆ ಹಾಗೂ ಮೈಸೂರಿನಲ್ಲಿ ಮಾರ್ಚ್ 30 ರಂದು ಏರ್ಪಡಿಸಿರುವ ರಾಜ್ಯ ಮಟ್ಟದ ಕಾರ್ಯಗಾರದ ಬಗ್ಗೆ ಮಾಹಿತಿ ಯನ್ನು ನೀಡಿದರು.
ರೋಗ ಹರಡುವಿಕೆಯ ಬಗ್ಗೆ, ಮನುಷ್ಯರಿಗೆ ಮಾತ್ರ ಬರುವ ಈ ಕಾಯಿಲೆ ಬಗ್ಗೆ, ಎ ಆರ್ ಟಿ ಮಾತ್ರೆಗಳ ಬಗ್ಗೆ, ಮಹಿಳೆಯರು ಈ ರೋಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತುತ್ತಾಗುವ ಬಗ್ಗೆ ಡಾ. ಕಿಶೋರ್ ಅವರು ವಿವರಿಸಿದರು. ಇಂದು ಬುಡಕಟ್ಟು ಜನಾಂಗದವರಿಗೆ ಈ ಸಂಬಂಧ ಮಾಹಿತಿ ನೀಡಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಮಾತನಾಡಿದ ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಅವರು 1990 ರವರೆಗೆ ಬುಡಕಟ್ಟು ಜನಾಂಗದಲ್ಲಿದ್ದವರು ಕೇವಲ 19.16 ಲಕ್ಷ ಜನರು. 2001ರ ಪ್ರಕಾರ 34.64 ಲಕ್ಷ ಜನರು ಈ ಜನಾಂಗದಲ್ಲಿದ್ದು, ರಾಯಚೂರಿನಲ್ಲಿ ಅತೀ ಹೆಚ್ಚು ಬುಡಕಟ್ಟು ವರ್ಗದ ಜನಸಂಖ್ಯೆಯಿದೆ; ಇವರಿಗೆ ಆರೋಗ್ಯಕರವಾಗಿ ಬದುಕಲು ಸಮಾನ ಅವಕಾಶವಿದ್ದು, ಆರೋಗ್ಯ ಕಾರ್ಯಕ್ರಮಗಳಡಿ ಸೇರ್ಪಡೆಗೊಳಿಸಿ ಮಾಹಿತಿ ನೀಡುವ ಬಗ್ಗೆ ಚರ್ಚಿಸಲಾಯಿತು. ಬಳಿಕ ಹೊಂಗಿರಣ ಪಾಸಿಟಿವ್ ನೆಟ್ ವರ್ಕನ ಶ್ರೀಮತಿ ಸೀಮಾ, ಅವರೊಂದಿಗೆ ಅನುಭವ ಹಂಚಿಕೆ, ಐಸಿಟಿಸಿಯ ಆಶಾ ಕುಮಾರಿ ಅವರು ಏಡ್ಸ್ ಸಂಬಂಧ ಜಿಲ್ಲೆಯಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಎಚ್ ಐ ವಿ ಪ್ರಿವೆನ್ಷನ್ ಮತ್ತು ನಿಯಂತ್ರಣದ ಬಗ್ಗೆ, ಕ್ರಿಯಾಯೋಜನೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.