ಮಂಗಳೂರು,ಮಾರ್ಚ್8: ಜನನಿಬಿಡವಲ್ಲದ ಮಂಗಳೂರಿನ ಸುಲ್ತಾನಬತ್ತೇರಿಯ ರಸ್ತೆಯಲ್ಲಿ ನಡದು ಹೋಗುತ್ತಿದ್ದ ಒಂದು ಸಾಮಾನ್ಯ ಮಹಿಳೆಗೆ ಎಲ್ಲರೂ ಕರೆದು ಪ್ರೀತಿಯಿಂದ ನಮಸ್ಕಾರ ಹೇಳುತ್ತಿರುವುದು ಕಂಡಿತು. ಕುತೂಹಲದಿಂದ ವಿಚಾರಿಸಿದಾಗ ಅವರು ಅಲ್ಲೇ ಪಕ್ಕದಲ್ಲಿರುವ ಅಕ್ಷರ ಸದನದ ಅಂಗನವಾಡಿ ಟೀಚರ್ ಎಂದು ಗೊತ್ತಾಯಿತು. ಓಹ್ ಪರವಾಗಿಲ್ಲ,ಜನರು ಎಷ್ಟು ಪ್ರೀತಿ ಮತ್ತು ಭಕ್ತಿಯಿಂದ ಟೀಚರ್ ಗೆ ಇಂದೂ ನಮಸ್ಕರಿಸುತ್ತಾರಲ್ಲ ಎಂದು ಖುಷಿಯಾಯಿತು.ಇನ್ನೊಬ್ಬರ ಬಗ್ಗೆ ತಲೆಕೆಡಿಸಿಕೊಳ್ಳದ ಪ್ರಸಕ್ತ ದಿನಗಳಲ್ಲೂ ಅಂಗನವಾಡಿ ಟೀಚರ್ ಬಗ್ಗೆ ಸ್ಥಳೀಯರಿಗೆ ಎಷ್ಟೊಂದು ಪ್ರೀತಿ; ಅವರ ಬಗ್ಗೆ ತಿಳಿದು ಕೊಳ್ಳಬೇಕೆನಿಸಿತು.ಪರಿಚಯಿಸಿಕೊಂಡಾಗ ಆತ್ಮೀಯವಾಗಿ ಮಾತನಾಡಿಸಿದರು. ಇಲ್ಲಿಯ ಜನರು ಬಹಳ ಒಳ್ಳೆಯವರು,ಮಹಿಳೆಯರಿಗೆ ಸಾಕಷ್ಟು ಲೋಕಜ್ಞಾನ ಇಲ್ಲ. ಏನೇ ಸಮಸ್ಯೆ ಆದರೂ ನನ್ನ ಬಳಿ ಬರುತ್ತಾರೆ;ಟೀಚರ್ ಹೀಗಾಯಿತು ಏನು ಮಾಡಬಹುದು ಎಂದು ಕೇಳುತ್ತಾರೆ. ನನಗೆ ತಿಳಿದ ಪರಿಹಾ ರ ಹಾಗೂ ಸಹಾಯವನ್ನು ಮಾಡುತ್ತೇನೆ.ನಾನೇನೂ ಬಹಳ ದೊಡ್ಡ ಜನ ಅಲ್ಲ, ಅವರ ಸಮಸ್ಯೆಗೆ ಕಿವಿಯಾಗುತ್ತೇನೆ, ಅವರ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇನೆ. ಇಲ್ಲಿನ ಸ್ವಸಹಾಯ ಸಂಘದವರಿಗೆ ನೆರವಾಗುತ್ತೇನೆ. ಸ್ಥಳೀಯ ಸ್ಪೋರ್ಟ್ಸ್ ಕ್ಲಬ್ ನವರೊಂದಿಗೆ ಉತ್ತಮ ಸಂಬಂಧವಿದೆ. ನೇತ್ರಾವತಿ ಗ್ರಾಮೀಣ ವಿಕಾಸ ಬ್ಯಾಂಕ್ ನ ಸಹಕಾರವಿದೆ ಎನ್ನುವ ಟೀಚರ್ ಅದೂ ಒಬ್ಬ ಅಂಗನವಾಡಿ ಟೀಚರ್ ರ ಸೇವೆ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಸ್ಮರಿಸಲೇ ಬೇಕೆನಿಸಿತು.
ಅಂಗನವಾಡಿ ಟೀಚರ್ ಕೆಲಸಕ್ಕೆ ಹೆಚ್ಚಿನ ಸಂಬಳವಿಲ್ಲ. 9 ವರ್ಷಗಳ ಹಿಂದೆ ನನ್ನ ಗಂಡ ಕ್ಯಾನ್ಷರ್ ನಿಂದಾಗಿ ತೀರಿಹೋದಾಗ, ಮನೆಯಿಂದ ಪ್ರಯಾಣ, ಮಕ್ಕಳನ್ನು ಸಾಕುವ ಹೊರೆ ಹೆಚ್ಚಾದಾಗ ಕೆಲಸ ಬಿಡಲು ಮುಂದಾದ ತನಗೆ ಸ್ಥಳೀಯ ದೇವಾಲಯದ ಮೊಕ್ತೇಸರರು ಪ್ರತಿ ತಿಂಗಳು ಬಸ್ ಪ್ರಯಾಣಕ್ಕೆ ದುಡ್ಡು ಕೊಡುವ ವ್ಯವಸ್ಥೆಯನ್ನು ಮಾಡಿದರು. ಯಾವುದೇ ಕಾರಣಕ್ಕೂ ಕೆಲಸ ಬಿಡುವ ಹಾಗೂ ಬೋಳಾರದ ಅಕ್ಷರ ಸದನದಿಂದ ಹೋಗುವ ಮಾತನ್ನಾಡಬಾರದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಂತಹ ಪ್ರೀತಿ ಸುಮ್ಮನೆ ಸಾಧ್ಯವೇ?
1983ರಲ್ಲಿ ಕೊಂಚಾಡಿಯ ಅಂಗನವಾಡಿ ಕೇಂದ್ರಕ್ಕೆ ಟೀಚರ್ ಆಗಿ ಸೇರಿದ ಕುಮುದಾಕ್ಷಿ 1993 ರಲ್ಲಿ ಸುಲ್ತಾನಬತ್ತೇರಿಗೆ ಆಗಮಿಸಿದರು. ಇಲ್ಲಿ ಮಕ್ಕಳಿಗೆ ಸ್ಪೋರ್ಟ್ಸ್ ಕ್ಲಬ್ ನ ಒಂದು ಕೋಣೆಯಲ್ಲಿ ತರಗತಿ ನಡೆಯುತ್ತಿತ್ತು. ಟೀಚರ್ ಸತತ ಪ್ರಯತ್ನದ ಫಲವಾಗಿ ಮಂಗಳೂರು ಮಹಾನಗರಪಾಲಿಕೆ ಟಿಪ್ಪು ಸುಲ್ತಾನ ನಿರ್ಮಿಸಿದ್ದ ಕಾವಲು ಗೋಪುರದ ಎದುರೇ ಅಂಗನವಾಡಿ ಶಾಲೆಗೆ ಸ್ಥಳ ಮಂಜೂರು ಮಾಡಿತು. ಹಲವು ತಿಂಗಳು ಈ ಸ್ಥಳದಲ್ಲಿದ್ದ ಮರದ ನೆರಳಿನಲ್ಲಿ ಮಕ್ಕಳನ್ನು ಓದಿಸಿದ ಟೀಚರ್ ರ ಅವಿರತ ಪ್ರಯತ್ನದ ಫಲವಾಗಿ ಅಕ್ಷರ ಸದನ ನಿರ್ಮಾಣವಾಯಿತು. ಇದಕ್ಕೆಲ್ಲ ಸ್ಥಳೀಯರ ಸಹಕಾರ ಇತ್ತೆಂಬುದನ್ನು ಹೇಳಲು ಅವರು ಮರೆಯುವುದಿಲ್ಲ. 2004ರಲ್ಲಿ ನಿರ್ಮಿಸಿದ ಅಂಗನವಾಡಿ ಅಕ್ಷರ ಸದನದಲ್ಲಿ ಇಂದು 40 ಮಕ್ಕಳಿದ್ದಾರೆ. ಕುಮುದಾಕ್ಷಿ ಟೀಚರ್ ಅಂಗನವಾಡಿಗೆ ಹೋಗಿ ಮಕ್ಕಳೊಂದಿಗೆ ನಾಳೆಯಿಂದ ನಾನು ನಿಮ್ಮ ಅಂಗನವಾಡಿ ಟೀಚರ್ ಕುಮುದಾಕ್ಷಿ ಟೀಚರ್ ಬೇರೆ ಊರಿಗೆ ಹೋಗುತ್ತಾರೆ ಎಂದಾಗ ಮಕ್ಕಳದ್ದು ಒಕ್ಕೊರಲ ಧ್ವನಿ ಬೇಡ,ಬೇಡ ನಮಗೆ ಅವರೇ ಬೇಕು; ನೀವು ಬೇಡ ಎಂದಾಗ ಟೀಚರ್ ಬಗ್ಗೆ ಒಮ್ಮೆ ಅಸೂಯೆಯ ಕಿಡಿ ಮೂಡದಿರದು. ಅವರು ಸವೆಸಿದ ಈ ಹಾದಿಯಲ್ಲಿ ಸಾಕಷ್ಟು ಕಲ್ಲು-ಮುಳ್ಳುಗಳಿದ್ದವು; ಸವಾಲುಗಳಿದ್ದವು, ಆದರೆ ಅವರ ಧೀ:ಶಕ್ತಿ ಮತ್ತು ಸ್ಥಳೀಯರ ಸಹಕಾರ ಒಬ್ಬ ಸಾಮಾನ್ಯ ಮಹಿಳೆ ಸಮಾಜ ಮುಖಿಯಾಗಿ ಹೇಗೆ ಕರ್ತವ್ಯ ನಿರ್ವಹಿಸಬಹುದೆಂಬುದಕ್ಕೆ ಸಾಕ್ಷಿ. ಇವರ ಈ ಸಾಧನೆಯನ್ನು ಗುರುತಿಸಿ ಸರ್ಕಾರದಿಂದ ರಾಜ್ಯ ಮಟ್ಟದ ಪ್ರಶಸ್ತಿಯು ದೊರೆತಿದೆ. ಎಲ್ಲ ರೀತಿಯ ಸಮಾಜಕ್ಕೆ ಸಹಕಾರಿಯಾಗುವ ಕಾರ್ಯಕ್ರಮಗಳಿಗೆ ವೇದಿಕೆಯನ್ನೊದಗಿಸಿ ಬೆನ್ನುತಟ್ಟಿ ಹುರಿದುಂಬಿಸುವ ಇಂತಹ ಟೀಚರ್ ಮಹಿಳೆಯರಿಗೊಂದು ಪ್ರೇರಕಶಕ್ತಿಯಾಗಿದ್ದಾರೆ. ಇವರ ಪ್ರೇರಣೆಯಿಂದ ಸ್ವಸಹಾಯ ಸಂಘಗಳು ಉತ್ತಮವಾಗಿ ನಡೆಯುತ್ತಿದ್ದು, ಅತ್ಯಪರೂಪ ಎಂಬಂತೆ ಇಲ್ಲಿನ 18 ಜನ ಮಹಿಳೆಯರು ಸವಿನಯ ಎಂಬ ಹೆಸರಿನ ಬೋಟ್ ಖರೀದಿಸಿ ವ್ಯವಹಾರ ಆರಂಭಿಸಿ, ಯಶಸ್ವಿಯೂ ಆಗಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ದೇಶದ ಆರ್ಥಿಕ ವ್ಯವಸ್ಥೆಗೆ ಈ ಸ್ತ್ರೀ ಶಕ್ತಿ ಸಂಘಟನೆಗಳ ಕೊಡುಗೆ ಗಮನಾರ್ಹವಾಗಿದ್ದು, ಉಳಿತಾಯ ಮತ್ತು ಉಳಿತಾಯದ ಚಟದಿಂದಾಗುವ ಲಾಭದ ಬಗ್ಗೆಯೂ ಬೋಳಾರದ ಜನರು ಟೀಚರಿಂದ ತಿಳಿದುಕೊಂಡಿದ್ದಾರೆ. ಮಹಿಳಾ ದಿನಾಚರಣೆ 100 ನೇ ವರ್ಷಕ್ಕೆ ಕಾಲಿಡುತ್ತಿರುವ ಇಂದಿನ ಈ ವಿಶೇಷ ದಿನದಂದು ಎಲ್ಲರ ಪ್ರೀತಿಗೆ ಪಾತ್ರರಾದ ಕುಮುದ ಟೀಚರ್ ಗೊಂದು ವಿಶೇಷ ನಮಸ್ಕಾರ.