ಮಂಗಳೂರು,ಮಾರ್ಚ್ 8:ಸಮಾನತೆ ಹಾಗೂ ಲಿಂಗತಾರತಮ್ಯದ ಬಗ್ಗೆ ಮನೆಯೇ ಮೊದಲ ಪಾಠಶಾಲೆಯಾಗಬೇಕು;ಹೆತ್ತವರು ಮಕ್ಕಳನ್ನು ಬೆಳೆಸುವಾಗ ಹೆಣ್ಣು ಗಂಡೆಂದು ತಾರತಮ್ಯ ಮಾಡದೆ ಬೆಳೆಸಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಬಿ.ಎಂ ಪಟೇಲ್ ಅವರು ಹೇಳಿದರು. ಅವರಿಂದು ಎದುರು ಪದವಿನ ಗ್ರಾಮಾ ಭಿವೃದ್ಧಿ ಸಂಘದಲ್ಲಿ ದಕ್ಷಿಣ ಕನ್ನಡ ಕಾನೂನು ಸೇವೆಗಳ ಪ್ರಾಧಿಕಾರ, ಜನಶಿಕ್ಷಣ ಟ್ರಸ್ಟ್, ವಾರ್ತಾ ಇಲಾಖೆ, ಅಪ್ನಾದೇಶ್ ಮಾದರಿ ಗ್ರಾಮಾಭಿವೃದ್ಧಿ ಆಂದೋಲನ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೂಡುಶೆಡ್ಡೆ ಗ್ರಾಮ ಪಂಚಾಯತ್, ನವಸಾಕ್ಷರರ ಸಂಘ, ಗ್ರಾಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಆಯೋಜಿಸ ಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳೆ ಮತ್ತು ಕಾನೂನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಕ್ಕೂ ಪ್ರತ್ಯೇಕ ವೈಶಿಷ್ಟ್ಯವಿದೆ;ಶಕ್ತಿಯಿದೆ ಈ ಶಕ್ತಿಯ ಸದ್ಬಳಕೆ ಆಗಬೇಕು.ಸಮಾನತೆ ನಮಗೆ ಸಂವಿಧಾನಬದ್ಧವಾಗಿ ದೊರೆತಿರುವ ಹಕ್ಕು ಇದರ ಸದ್ಬಳಕೆಯಾಗಬೇಕು ಎಂದ ಅವರು, ಸ್ತ್ರೀಧನ,ಜೀವನ ನಿರ್ವಹಣೆ ಭತ್ಯೆಯ ಬಗ್ಗೆ ಸವಿವರ ಮಾಹಿತಿ ನೀಡಿದರು. ಅನ್ಯಾಯವಾದಾಗ ಕಾನೂನಿನ ಕದತಟ್ಟಲು ಹಿಂಜರಿಕೆ ಬೇಡ ಎಂದರು.
ಸಮಾ ರಂಭದಲ್ಲಿ ಉಪಸ್ಥಿತರಿದ್ದ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಂ ಮಲ್ಲಿ ಅವರು ಮಾತನಾಡಿ, ವ್ಯಾಜ್ಯ ಮುಕ್ತ, ಕಸಮುಕ್ತ ಸ್ವಚ್ಛ ಗ್ರಾಮ ಹಾಗೂ ನೈರ್ಮಲ್ಯ ಗ್ರಾಮ ನಿರ್ಮಾಣ ನಮ್ಮ ಸಂಕಲ್ಪವಾಗಬೇಕು ಎಂದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 230 ಮನೆಗಳಿಂದ ಯಾವುದೇ ಸಮಸ್ಯೆ ಬರಬಾರದು ಎಂದ ಅವರು, ಪ್ರತಿಯೊಬ್ಬರಲ್ಲೂ ಇದು ನಮ್ಮ ಮನೆ, ನಮ್ಮ ರಸ್ತೆ, ನಮ್ಮ ಗ್ರಾಮವೆಂಬ ಭಾವನೆ ಇರಬೇಕು ಹಾಗಾದಾಗ ಮಾತ್ರ ನಮ್ಮದು ಮಾದರಿ ಗ್ರಾಮಪಂಚಾಯಿತಿಯಾಗಲು ಸಾಧ್ಯ ಎಂದರು. ಎದುರುಪದವು ಸ್ವಸಹಾಯ ಸಂಘದ ಸದಸ್ಯರಿಂದ ಜಾನಪದ ನೃತ್ಯ, ಗ್ರಾಮದ ವೆಂಕಟಾಚಾರ್ಯರಿಂದ ದೀಪ ನೃತ್ಯ ಪ್ರದರ್ಶನ ನಡೆಯಿತು. ಸಂವಾದ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕಾಂತರಾಜ್, ಗ್ರಾಮಪಂಚಾಯಿತಿ ಅಧ್ಯಕ್ಷರಾದ ಕವಿತ, ಉಪಾಧ್ಯಕ್ಷ ಹರೀಶ್ ಕೋಟ್ಯಾನ್, ಸುರೇಶ್, ಬಿ.ಫಾತುಮ್ಮ,ಫಾತುಞಿ, ಮಹಮ್ಮದ್ ಸೇರಿದಂತೆ ನವಸಾಕ್ಷರರು ಪಾಲ್ಗೊಂಡರು. ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನಶೆಟ್ಟಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ಮಹಿಳಾ ದಿನಾಚರಣೆಯ ಬಗ್ಗೆ ಮಾಹಿತಿ ನೀಡಿದರು.ಕೃಷ್ಣ ಮೂಲ್ಯ ಅವರು ಕಾರ್ಯಕ್ರಮ ನಿರೂಪಿಸಿದರು.