ಮಂಗಳೂರು,ಮಾರ್ಚ್6: ಕಳೆದ 40 ವರ್ಷಗಳಿಂದ ಕರಾವಳಿ ಜನತೆಯ ಪ್ರಮುಖ ಬೇಡಿಕೆಯಾಗಿದ್ದ ಪಡೀಲ್-ಬಜಾಲ್ ನಲ್ಲಿ ಹಾಗೂ ಜಪ್ಪು ಮಹಾಕಾಳಿಪಡ್ಪು 2 ರೈಲ್ವೇ ಕೆಳಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಅನುಮೋದನೆ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದ್ದಾರೆ.
ಅವರಿಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯ ನ್ನುದ್ದೇಶಿಸಿ ಮಾತನಾಡಿ, ರಾಜ್ಯ ಸರ್ಕಾರ ವೇಗವಾಗಿ ಬೆಳೆಯುತ್ತಿರುವ ಮಂಗಳೂರಿಗೆ ನೀಡಿರುವ ಆದ್ಯತೆಯ ಬಗ್ಗೆ ಗಮನ ಸೆಳೆದರು. ಪಡೀಲ್-ಬಜಾಲ್ ಗೆ ರಾಜ್ಯ ಸರ್ಕಾರ 1.97 ಕೋಟಿ ಮತ್ತು ರೈಲ್ವೇ ಇಲಾಖೆ 1.97 ಕೋಟಿ ರೂ. ಜಂಟಿಯಾಗಿ ಭರಿಸಲಿದೆ. ಜಪ್ಪು ಮಹಾ ಕಾಳಿಪಡ್ಪುವಿನಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ 12.43 ಕೋಟಿ ರೂ. ನೀಡಿದೆ ಎಂದರು. ಈ ಸಂಬಂಧ ಮನಾಪ ಮತ್ತು ರೈಲ್ವೇ ಇಲಾಖೆ ಇಲ್ಲಿ ಸರ್ವೇ ಕಾರ್ಯ ಆರಂಭಿಸಿದ್ದು, ಸದ್ಯದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಅವರು ತಿಳಿಸಿದರು.
ಬಜೆಟ್ ನಲ್ಲಿ ಕೃಷಿಕರಿಗೆ, ಬಡವರ್ಗದವರಿಗೆ,ಅಲ್ಪಸಂಖ್ಯಾತರಿಗೆ ಹಾಗೂ ಮೀನುಗಾರರಿಗೆ ವಿಶೇಷ ಒತ್ತು ನೀಡಲಾಗಿದೆ. ಮೀನುಗಾರರಿಗೆ ಡೀಸೆಲ್ ಸಬ್ಸಿಡಿ ಮಿತಿಯನ್ನು 85,000 ಕಿಲೋ ಲೀಟರ್ ಗೆ ಏರಿಸಲಾಗಿದೆ. ಕೊಡೇರಿ ಮೀನುಗಾರಿಕೆ ಬಂದರಿಗೆ 10 ಕೋಟಿ, ಕಾರವಾರ ಬಂದರಿನಲ್ಲಿ ಹೂಳೆತ್ತುವುದಕ್ಕೆ 15 ಕೋಟಿ ಮೀಸಲಿರಿಸಿದೆ. ಆಶ್ರಯ ಫಲಾನುಭವಿಗಳಿಗೆ ಬಡ್ಡಿ ಮನ್ನಾ ಮಾಡಲು ನಿರ್ಧರಿಸಿದೆ. ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಯೋಜನೆ ಜಾರಿ ಮಾಡಿದೆ. ಪಿಲಿಕುಳ ಅಭಿವೃದ್ಧಿಗೆ ಒಂದು ಕೋಟಿ ರೂ.ನೀಡಿದೆ. ರಸ್ತೆ ಅಭಿವೃದ್ಧಿಗೆ ಬಹಳಷ್ಟು ಪ್ರಾಧಾನ್ಯತೆ ನೀಡಿದ್ದು, ಅನುದಾನ ನೀಡಲಿದೆ. ಮನಾಪ ರಸ್ತೆ ಅಭಿವೃದ್ಧಿಗೆ ಇನ್ನು 100 ಕೋಟಿ ನೀಡಲಿದೆ.
ಕುಡಿಯುವ ನೀರಿಗೆ ಕಿನ್ನಿಗೋಳಿ ಮತ್ತು 16 ಗ್ರಾಮಗಳಿಗೆ 17 ಕೋಟಿ ರೂ.ಬಿಡುಗಡೆ ಮಾಡಿದೆ. ಮಳವೂರು ಮತ್ತು 10 ಗ್ರಾಮಗಳಿಗೆ 10 ಕೋಟಿ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.