ಮಂಗಳೂರು ಮಾರ್ಚ್17: ಕರಾವಳಿಯ ನದಿ ಹಾಗೂ ಮೀನುಗಾರಿಕೆ ಇಲ್ಲಿನ ಸೂಕ್ಷ್ಮ ಪರಿಸರವನ್ನು ಅವಲಂಬಿಸಿದ್ದು,ಈ ದೃಷ್ಟಿಯಿಂದ ಪಾರಂಪರಿಕ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಮತ್ತು ಸಹನಶೀಲ ಮೀನುಗಾರಿಕೆಯ ಉದ್ದೇಶ ಈಡೇರಿಸಲು ಸಮಗ್ರ ಸಹನಶೀಲ ಮೀನುಗಾರಿಕೆ ನೀತಿ ಜಾರಿಗೆ ತರಲು ಕಾರ್ಯಾಗಾರದಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು.
ಇಂದು ಪಶ್ಚಿಮ ಘಟ್ಟ ಕಾರ್ಯಪಡೆ ಹಾಗೂ ರಾಜ್ಯ ಅರಣ್ಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಒಂದು ದಿನದ ಕಾರ್ಯಾ ಗಾರದಲ್ಲಿ ಜಿಲ್ಲೆಯ ನದಿ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದಂತೆ ನಡೆದ ಸಮಗ್ರ ಚರ್ಚೆಯ ಬಳಿಕ ಸರ್ಕಾರಕ್ಕೆ ಇಲ್ಲಿನ ಜನಪರ ಹಾಗೂ ವೈಜ್ಞಾನಿಕ ಅಭಿಪ್ರಾಯಗಳನ್ನು ತಿಳಿಸುವುದಾಗಿ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಆಶೀಸರ ತಿಳಿಸಿದರು.
ಕೈಗಾರಿಕೆ ಹಾಗೂ ನಗರ ತ್ಯಾಜ್ಯವನ್ನು ಸಮುದ್ರಕ್ಕೆ ಸಂಸ್ಕರಿಸಿ ಬಿಡುವ ಬಗ್ಗೆ ಹಾಗೂ ಜೂನ್ –ಆಗಸ್ಟ ತಿಂಗಳವರೆಗೆ ಮೀನುಗಾರಿಕೆಗೆ ವಿರಾಮ ನೀಡಲು ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಪರಿಣಾಮಕಾರಿ ಕ್ರಮಕೈಗೊಳ್ಳಲು ನಿರ್ಧರಿಸಲಾಯಿತು.
ಆಮೆ, ಡಾಲ್ಫಿನ್ ಸೇರಿದಂತೆ ಅತ್ಯಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಜಲಚರಗಳ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆಗಳು ಸಹಯೋಗದಿಂದ ಕರ್ತವ್ಯ ನಿರ್ವಹಿಸುವಂತೆ ಹಾಗೂ ಬೃಹತ್ ಮೀನುಗಾರಿಕೆ ದೋಣಿಗಳು ಟೆಡ್ ಉಪಕರಣ ಅಳವಡಿಸಬೇಕೆಂದು ಹೇಳಲಾಯಿತು.
ಮರಿಮೀನುಗಳ ಅನಾವಶ್ಯಕ ನಾಶ ತಪ್ಪಿಸಲು ಮೀನಿನ ಬಲೆಯ ಕಣ್ಣಿನ ಕನಿಷ್ಠ ಅಳತೆಯನ್ನು ಕರ್ನಾಟಕ ಸಮುದ್ರ ಮೀನುಗಾರಿಕೆ ಕಾಯ್ದೆಯನ್ವಯ ಜಾರಿಗೊಳಿಸಲು ಸರ್ಕಾರಿ ಆದೇಶ ಹೊರಡಿಸಬೇಕು ಹಾಗೂ ಪಶ್ಚಿಮ ಘಟ್ಟದಿಂದ ಹರಿದುಬರುವ ನದಿ ನೀರು ಸಮುದ್ರ ಸೇರುವ ಪ್ರಕ್ರಿಯೆ ಸುಸ್ಥಿರ ಮೀನುಗಾರಿಕೆಯ ಅಗತ್ಯವಾಗಿದ್ದು, ನೇತ್ರಾವತಿ ನದಿ ತಿರುವು ಯೋಜನೆ ಹಾಗೂ ಬೃಹತ್ ಯೋಜನೆಗಳು ಮೀನುಗಾರಿಕೆಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಇಂತಹ ಯೋಜನೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಲಾಯಿತು.
ಕರಾವಳಿ ಪ್ರದೇಶದುದ್ದಕ್ಕೂ ಇರುವ ಸೂಕ್ಷ್ಮ ಪ್ರದೇಶಗಳನ್ನು ಮೀನುಗಾರಿಕೆ ವೈವಿಧ್ಯದ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಸಂರಕ್ಷಿಸಬೇಕಲ್ಲದೆ, ಸರ್ಕಾರ ಜಾರಿಗೆ ತರುತ್ತಿರುವ ಕರಾವಳಿ ಹಸಿರು ಕವಚ ಕರಾವಳಿಯಾದ್ಯಂತ ವಿಸ್ತರಿಸಬೇಕು. ಮೀನುಗಾರರನ್ನು ಈ ಸಂಬಂಧ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ವಿವಿಧ ಸಂಶೋಧನಾ ಸಂಸ್ಥೆಗಳು, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯರು ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಬೇಕು. ಅಳಿವೆ, ಕಾಂಡ್ಲಾ ಹಾಗೂ ನದಿಮುಖಗಳನ್ನು ಮೀನುಗಾರಿಕೆಜ ಹಿತದೃಷ್ಟಿಯಿಂದ ಸಂರಕ್ಷಿಸಬೇಕೆಂಬ ನಿರ್ಣಯಗಳನ್ನು ಕಾರ್ಯಾಗಾರದಲ್ಲಿ ತೆಗೆದುಕೊಳ್ಳಲಾಗಿದೆ.