ಮಂಗಳೂರು,ಫೆ.28:ದಕ್ಷಿಣ ಕನ್ನಡ,ಉಡುಪಿ ಜಿಲ್ಲೆಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವವನ್ನು ನಿವಾರಿಸಲು ಅವಳಿ ಜಿಲ್ಲೆಗಳಿಗೆ ತಲಾ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು. ಅವರಿಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಶ್ರೀ ವೈದ್ಯನಾಥೇಶ್ವರ ದೇವಾಲಯದ ಸಂಕ್ರಾಂತಿ ಮೈದಾನದಲ್ಲಿ ಕ್ರಿಮಿನಾಶಕ ಸಿಂಪಡಣೆಯಿಂದ ತೊಂದರೆಗೀಡಾದ ಸಂತ್ರಸ್ತರಿಗೆ ಪರಿಹಾರ ವಿತರಣೆ ಹಾಗೂ ಜಿಲ್ಲಾ ಪಂಚಾಯತ್ ನ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು.
ಜನರ ಸಮಸ್ಯೆಗೆ ಸ್ಪಂದಿಸುವ ಜನರ ಸರ್ಕಾರದ ನೇತೃತ್ವ ವಹಿಸಿರುವ ತಾನು, ಸಾರ್ವಜನಿಕರ ಅದರಲ್ಲೂ ಮುಖ್ಯವಾಗಿ ಗ್ರಾಮೀಣರ ಸಮಸ್ಯೆಗೆ ತಕ್ಷಣವೇ ಸ್ಪಂದಿಸುತ್ತಿದ್ದು, ವಿಧಾನಸಭೆಯಲ್ಲಿ ಸ್ಥಳೀಯರ ಅಂಗವೈಕಲ್ಯ ಹಾಗೂ ಕ್ಯಾನ್ಸರ್ ರೋಗದ ಬಗ್ಗೆ ಮಾಜಿ ಸಚಿವರಾದ ಶೋಭಾ ಕರಂದ್ಲಾಜೆ ಅವರು ಗಮನ ಸೆಳೆದಾಗ ಸಂತ್ರಸ್ತರಿಗೆ ಪರಿಹಾರ ನೀಡಲು ತಕ್ಷಣವೇ ಕಾರ್ಯೋ ನ್ಮುಖವಾದ ಬಗ್ಗೆ ವಿವರಿಸಿದರು. ಮಾರ್ಚ್ 5 ರಂದು ಮಂಡಿಸುವ ಬಜೆಟ್ ನಲ್ಲಿ ರೈತರ ಮತ್ತು ಗ್ರಾಮೀಣರ ಅಭಿವೃದ್ಧಿಗೆ ಹೆಚ್ಚಿನ ಒತ್ತುಕೊಡಲಾಗಿದೆ.ರಾಜ್ಯ ಎದುರಿಸುತ್ತಿರುವ ವಿದ್ಯುತ್ ಅಭಾವ ನಿವಾರಿಸಲು ವಿದ್ಯುತ್ ಖರೀದಿಗೆ ಸರ್ಕಾರ ಮುಂದಾಗಿದ್ದು, 800 ಮೆಗಾವ್ಯಾಟ್ ವಿದ್ಯುತ್ ನ್ನು ಇತರ ಮೂಲಗಳಿಂದ ಖರೀದಿಸಿ ರಾಜ್ಯದ ವಿದ್ಯುತ್ ಕ್ಷಾಮ ನಿವಾರಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಬೇಸಿಗೆಯಲ್ಲಿ ಎದುರಾಗುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಿಂಡಿ ಅಣೆಕಟ್ಟು ನಿರ್ಮಿಸಲು ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿಡಲಿದ್ದೇನೆ ಭರವಸೆಯನ್ನು ಸಭೆಯಲ್ಲಿ ನೀಡಿದರು. ಕ್ರಿಮಿನಾಶಕ ಸಿಂಪಡಣೆ ಯಿಂದಾಗುವ ಅನಾ ಹುತಗಳನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ವಹಿಸುವ ತೀರ್ಮಾನ ಕೈಗೊಳ್ಳುವ ತುರ್ತು ಅಗತ್ಯವನ್ನು ಪ್ರತಿ ಪಾದಿಸಿದ ಅವರು, ಸಂತ್ರಸ್ತರಿಗೆ ಪರಿಹಾರ ಒದಗಿಸಲು ನಿಯಾಮ ವಳಿಗಳನ್ನು ಸಡಿಲಿಸಿ ಅತ್ಯಂತ ಕಡಿಮೆ ಸಮಯದಲ್ಲಿ ಪರಿಹಾರ ವಿತರಿಸಲು ಜಿಲ್ಲಾಡಳಿತ ಸಂಪೂರ್ಣ ಸಹಕರಿಸಿದೆ ಎಂದ ಮುಖ್ಯಮಂತ್ರಿಗಳು, ಪರಿಹಾರದಿಂದ ವಂಚಿತರಾದ ಕ್ಯಾನ್ಸರ್ ಪೀಡಿತರಿಗೂ ತಕ್ಷಣವೇ 400 ರೂ.ಮಾಸಾಶನ ವಿತರಿಸಲು ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಸಂತ್ರಸ್ತರ ಪುನರ್ ವಸತಿ ಕೇಂದ್ರಕ್ಕೆ 25ಲಕ್ಷ ರೂ.ಗಳನ್ನು ನೀಡುವುದಾಗಿ ಘೋಷಿಸಿದ ಮುಖ್ಯಮಂತ್ರಿಗಳು, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಪುನರ್ವಸತಿ ಕೇಂದ್ರ ನಡೆಸಲು ನಿರ್ದೇಶನ ನೀಡಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಜುಮ್ಮಾ ಮಸೀದಿ ಅಭಿವೃದ್ಧಿಗೆ 2 ಲಕ್ಷ ರೂ.,ಶ್ರೀರಾಮಸೇವಾ ಟ್ರಸ್ಟ್ ಗೆ 10 ಲಕ್ಷ ರೂ.ನೆರವು ಘೋಷಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಯಶವಂತಪುರ ಶಾಸಕರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿದರು.ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಸ್ವಾಗತಿಸಿದರು. ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ಸಂತೋಷ್ ಕುಮಾರ್ ಭಂಡಾರಿ, ಶಾಸಕರಾದ ಎನ್. ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ,ಐಜಿ ಗೋಪಾಲ್ ಹೊಸೂರ್, ಸಿಇಒ ಶಿವಶಂಕರ್ ಅವರು ವೇದಿಕೆಯಲ್ಲಿದ್ದರು.