ಮಂಗಳೂರು,ಫೆ.19: ನಗರೀಕರಣದ ಸಮಸ್ಯೆಗಳ ಬಗ್ಗೆ ಪರಿಶೀಲನೆ ಮಾಡಲು ಹಾಗೂ ಸಮಗ್ರ ಅಭಿವೃಧ್ಧಿಗೆ ಒತ್ತು ನೀಡಿ ಹೊಸ ದಿಕ್ಕಿನ ನಡೆ - ಚಿಂತನೆಗೆ ಮುನ್ನುಡಿಯಾಗಿ ನಗರಾಭಿವೃದ್ಧಿ ನೀತಿ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾದ ಡಾ.ಎ.ರವೀಂದ್ರ ಹೇಳಿದರು.
ಅವರು ಇಂದು ನಗರದ ಎಸ್ ಡಿ ಎಂ ಕಾಲೇಜ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ ನ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಮಂಗಳೂರು ನಗರ ಪಾಲಿಕೆ ಸಹಯೋಗದಲ್ಲಿ ಏರ್ಪಡಿಸಲಾದ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ನೀತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡು ತ್ತಿದ್ದರು.
ನಗರ ಬೇರೆ ಹಳ್ಳಿ ಬೇರೆ ಎಂಬ ಕಲ್ಪನೆಯನ್ನು ಮೀರಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಪುರ ಯೋಜನೆಯಂತೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕೆಂದರು.ಪರಿಮಿತಿ ಭೂಮಿಯನ್ನು ಸದ್ಭಳಕೆ ಮಾಡಿಕೊಂಡು ನಗರಾಭಿವೃದ್ಧಿ ಯೋಜನೆ ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ನಗರಾಭಿವೃದ್ಧಿ ಬಗ್ಗೆ ಕರಡು ನೀತಿ ತಯಾರಿಸಿ ಜನಾಭಿಪ್ರಾಯಕ್ಕೆ ಮನ್ನಣೆ ನೀಡಿ ಅಂತಿಮವಾಗಿ ಆದೇಶ ತರುವಂತಹ ವಿನೂತನವಾದ ಪ್ರಯತ್ನ ಮಾಡಿದೆ ಎಂದರು. ಸ್ಥಳೀಯ ಸಂಸ್ಥೆಗಳ ಪುನರ್ ಸಂಘಟನೆ, ಸ್ಥಳೀಯಾಡಳಿತದಲ್ಲಿ ಪ್ರಜಾಪ್ರಭುತ್ವ ಮಾದರಿ ಅಳವಡಿಸಿ ಶಕ್ತಿ ತುಂಬುವ ಬಗ್ಗೆಯೂ ಹೆಚ್ಚಿನ ಚಿಂತನೆ ನಡೆಸಲಾಗುತ್ತಿದೆ ಎಂದರು.
ಪ್ರಾಸ್ತಾವಿಕ ಮಾತು ಗಳನ್ನಾಡಿದ ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಅವರು, ನಗರಾ ಭಿವೃದ್ಧಿ ವಿಷಯದಲ್ಲಿ ಮಂಗಳೂರಿಗೆ ಇನ್ನಷ್ಟು ಪ್ರಾಧಾ ನ್ಯತೆಯನ್ನು ನೀಡಬೇಕೆಂದು ಪ್ರತಿಪಾದಿಸಿದರು. ಹೊಸ ನೀತಿ, ಯೋಜನೆ ರೂಪಿಸುವ ಸಂದರ್ಭದಲ್ಲಿ ಸಂಪನ್ಮೂಲಗಳ ಕ್ರೂಢೀಕರಣದ ಬಗ್ಗೆಯೂ ಸಮರ್ಪಕ ಮಾಹಿತಿ ನೀಡುವ ಅಗತ್ಯದ ಬಗ್ಗೆ ವಿವರಿಸಿದರು. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಶಂಭುದಯಾಳ್ ಮೀನ ಜವಾಬ್ದಾರಿಗಳ ಬಗ್ಗೆ ಹೆಚ್ಚಿನ ಚರ್ಚೆಯಾಗಬೇಕೆಂದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ ಮೇಯರ್ ಶಂಕರ್ ಭಟ್ ಅವರು, ಸ್ಥಳೀಯಾಡಳಿತಕ್ಕೆ ಪೂರ್ಣ ಪ್ರಮಾಣದಲ್ಲಿ ತುರ್ತು ಯೋಜನೆಯೊಂದನ್ನು ಜಾರಿಗೊಳಿಸಲಾಗದ ಪರಿಸ್ಥಿತಿಯ ಬಗ್ಗೆ,ಕೆಲವು ಸಂಸ್ಥೆಗಳು ನಗರ ಪಾಲಿಕೆಗೆ ತೆರಿಗೆ ನೀಡದಿರುವುದು ವಿಷಾದನೀಯ ಎಂದರು. ಸಮಾರಂಭದಲ್ಲಿ ಶಾಸಕ ಯು ಟಿ ಖಾದರ್, ಉಪಮೇಯರ್ ರಜನೀ ದುಗ್ಗಣ್ಣ, ಡಾ. ಅಶ್ವಿನಿ ಮಹೇಶ್ ಉಪಸ್ಥಿತರಿದ್ದರು.ಮನಾಪ ಆಯುಕ್ತ ಡಾ.ಕೆ.ಎನ್.ವಿಜಯಪ್ರಕಾಶ್ ಸ್ವಾಗತಿಸಿದರು.