ಮಂಗಳೂರು,ಫೆ.18:ಮಾರ್ಚ್ 3ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಲೈಂಗಿಕ ಅಲ್ಪಸಂಖ್ಯಾತರ ಸಾರ್ವಜನಿಕ ಸಭೆ ಕರೆಯಲಾಗಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಅವರಿಗೊಂದು ಉತ್ತಮ ನೆಲೆ ಕಲ್ಪಿಸಲು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಯೋಜನೆ ರೂಪಿಸಿದೆ ಎಂದು ಆಯೋಗದ ಅಧ್ಯಕ್ಷರಾದ ಸಿ.ಎಸ್.ದ್ವಾರಕನಾಥ್ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಆಲಿಸಿ, ಸ್ವೀಕರಿಸಿದರು.ಜಿಲ್ಲಾಧಿಕಾರಿ ಪೊನ್ನು ರಾಜ್, ಜಿಲ್ಲಾ ಪಂಚಾಯತ್ ಸಿಇಓ ಶಿವಶಂಕರ್,ನಗರ ಪಾಲಿಕೆ ಆಯುಕ್ತ ಡಾ.ವಿಜಯ ಪ್ರಕಾಶ್, ಮತ್ತು ಆಯೋಗದ ಸದಸ್ಯರು ಪಾಲ್ಗೊಂಡಿದ್ದರು.
ಬಳಿಕ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದ ಅವರು ಶೈಕ್ಷಣಿಕವಾಗಿ,ಸಾಮಾಜಿಕವಾಗಿ ಹಿಂದುಳಿದ ಈ ವರ್ಗಕ್ಕೆ ಸಾಮಾಜಿಕ ನ್ಯಾಯ ಒದಗಿಸಲು ಆಯೋಗ ವಿಶೇಷ ಚಿಂತನೆ ನಡೆಸಿದ್ದು, ಬೆಂಗಳೂರಿನ ಸಮತಾ ಸೈನಿಕ ದಳ ಈ ಬಗ್ಗೆ ತಮ್ಮ ಗಮನ ಸೆಳೆಯಿತು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸಾಮಾನ್ಯ ಜನಗಣತಿಗಿಂತ ಭಿನ್ನವಾಗಿ ಸಮಗ್ರ ಹಾಗೂ ಸಮರ್ಪಕವಾಗಿ ಸಾಮಾಜಿಕ ಮತ್ತು ಜನಾಂಗೀಯ ಸಮೀಕ್ಷೆ ಒಟ್ಟು 92 ಅಂಶಗಳನ್ನು ಸಮೀಕ್ಷೆಯಲ್ಲಿ ಸೇರಿಸಿ ದೇಶದಲ್ಲೇ ಪ್ರಥಮವಾಗಿ ಕರ್ನಾಟಕದಲ್ಲಿ ಪೈಲೆಟ್ ಪ್ರಾಜೆಕ್ಟ ಒಂದನ್ನು ರೂಪಿಸಲು ನಿರ್ಧರಿಸಲಾಗಿದೆ.ಇದಕ್ಕಾಗಿ 17.5 ಕೋಟಿ ರೂ.ಗಳ ಬಜೆಟನ್ನು ರೂಪಿಸಿದ್ದು,ಸ ರ್ಕಾರದ ಸಹಕಾರದೊಂದಿಗೆ ಯೋಜನೆ ಕಾರ್ಯಗತಗೊಳಿಸಲಾಗುವುದು ಎಂದರು. ಇತರೆಡೆಗಳಿಗೆ ಹೋಲಿಸಿದರೆ ಜಿಲ್ಲೆಯ ಹಾಸ್ಟೆಲ್ ವ್ಯವಸ್ಥೆ ಉತ್ತಮವಾಗಿದ್ದು, ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದರು.
ಸರ್ಕಾರ ಹಿಂದುಳಿದ ವರ್ಗಗಳಿಗಾಗಿ ನೀಡಿದ ಯೋಜನೆಗಳ ಅನುಷ್ಠಾನದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಅವರು, ತಮ್ಮ 3 ದಿನಗಳ ಪ್ರವಾಸದಲ್ಲಿ ಜಿಲ್ಲೆಯ ಸ್ಪಷ್ಟ ಚಿತ್ರಣ ದೊರೆತಿದ್ದು, ಹಿಂದುಳಿದ ವರ್ಗದ ಮಹಿಳೆಯರಿಗಾಗಿ ರುಡ್ ಸೆಟ್ ನಲ್ಲಿ ನೀಡುತ್ತಿರುವಂತಹ ತರಬೇತಿಯ ಮಾದರಿಯನ್ನು ಸರ್ಕಾರಿ ವಲಯದಲ್ಲೂ ಅಳವಡಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂದು ವಿವರಿಸಿದರು.ಆಯೋಗದ ಇತರ ಸದಸ್ಯರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.