ಮಂಗಳೂರು,ಫೆ.13:ಅತ್ಯಪರೂಪದ ಜೀವವೈವಿಧ್ಯ ಹೊಂದಿರುವ ಪ್ರದೇಶವೆಂದು ಖ್ಯಾತಿವೆತ್ತ ನಮ್ಮ ತುಳುಭೂಮಿಯಲ್ಲಿ ದೈವಿಕ ಪರಂಪರೆಗಿಂತ ಹಿಂದೆ ಪರಿಸರ ಆರಾಧನೆಯಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ಹೇಳಿದರು.
ಅವರಿಂದು ನಗರದ ಪುರಭವನದಲ್ಲಿ ತುಳು ಸಾಹಿತ್ಯ ಅಕಾಡೆಮಿ ತಾಲೂಕು ಮಹಿಳಾ ಮಂಡಲಗಳ ಸಹಕಾರದೊಂದಿಗೆ ಏರ್ಪಡಿಸಿದ ಕೆಡ್ಡಸ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇಲ್ಲಿನ ಜನರಿಗೆ ತುಳು ಭಾಷೆ ಮತ್ತು ಸಂಸ್ಕೃತಿ, ಪರಿಸರದ ಬಗ್ಗೆಗಿನ ವಿಶೇಷ ಕಾಳಜಿಯಿಂದ ಎಲ್ಲೆಡೆ ಗುರುತಿಸಲ್ಪಟ್ಟಿದ್ದಾರೆ. ನಮ್ಮ ಪಶ್ಚಿಮಘಟ್ಟದಲ್ಲಿ 4,800 ವಿಶೇಷ ಸಸ್ಯ ಪ್ರಭೇದಗಳಿದ್ದು,800 ಪ್ರಭೇದಗಳು ಮಾತ್ರ ಉಳಿದಿವೆ.ಪಿಲಿಕುಳದ ಸಸ್ಯಕಾಶಿಯನ್ನು ಅಭಿವೃದ್ಧಿ ಪಡಿಸಲು ವಾರ್ಷಿಕ 50 ಲಕ್ಷ ರೂ.ಗಳನ್ನು ಸರ್ಕಾರ ನೀಡುತ್ತಿದೆ. ಇದಕ್ಕೆಂದೇ ಒಟ್ಟು ಎರಡೂವರೆ ಕೋಟಿ ರೂ.ಗಳನ್ನು ಮೀಸಲಿರಿಸಿದೆ ಎಂದರು. ತುಳು ಅಕಾಡೆಮಿ ತುಳು ಭಾಷೆ ಅಭಿವೃದ್ಧಿಗೆ ಪರಿಣಾಮಕಾರಿ ಯೋಜನೆ ರೂಪಿಸಿ ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದ ಸಚಿವರು,ಸರ್ಕಾರ ಆರನೇ ತರಗತಿಯಿಂದ ತುಳುಭಾಷೆಯನ್ನು ಐಚ್ಛಿಕ ಪಾಠವಾಗಿ ಸೇರ್ಪಡೆಗೊಳಿಸಲು ಅಗತ್ಯಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ ಎಂದರು.
ತುಳು ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಸ್ವಾಗತಿಸಿದರು. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ನಿವೃತ್ತ ಶಿಕ್ಷಕಿ ಕೆ.ಎ.ರೋಹಿಣಿ ಭೂಮಿಪೂಜೆ ಮತ್ತು ಕೆಡ್ಡಸದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.