ಮಂಗಳೂರು, ಫೆಬ್ರವರಿ17: ಜಾಗೃತ ಜನರಿಗೆ ಅರಿವು - ನೆರವು ನೀಡಿ; ಸಾಮಾನ್ಯ ಜನರಿಗೆ ಅತಿ ಶೀಘ್ರದಲ್ಲಿ ನ್ಯಾಯ ನೀಡುವ ಉದ್ದೇಶವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹೊಂದಿದೆ ಎಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ಕೆ ಬಿ ಎಮ್ ಪಠೇಲ್ ಹೇಳಿದರು.
ಅವರಿಂದು ಉಳ್ಳಾಲ ಪುರಸಭೆ ಕಚೇರಿ ವಠಾರದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಳ್ಳಾಲ ಪುರಸಭೆ, ಜನಶಿಕ್ಷಣ ಟ್ರಸ್ಟ್ ನೋಡಲ್ ಏಜೆನ್ಸಿ ಕಪಾರ್ಟ್, ವಕೀಲರ ಸಂಘ ಮಂಗಳೂರು ಇವರ ಸಹಭಾಗಿತ್ವದಲ್ಲಿ ಏರ್ಪಡಿಸಲಾದ ಕಾನೂನು ಸಾಕ್ಷರತಾ ಜಾಗೃತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜಿಲ್ಲೆಗೆ ಆಗಮಿಸಿರುವ ಕಾನೂನು ಸಾಕ್ಷರತಾ ರಥವನ್ನು ಇಂದು ಉಳ್ಳಾಲದಲ್ಲಿ ಸ್ವಾಗತಿಸಿದ ಬಳಿಕ ಮಾಹಿತಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಾಧೀಶರು, ಜನರ ಕಷ್ಟ ಸುಖಗಳಲ್ಲಿ ನ್ಯಾಯಾಲಯವಿದೆ ಎಂಬ ಸಂದೇಶವನ್ನು ಹೊತ್ತು ನ್ಯಾಯರಥ ಸಂಚರಿಸಲು ಆರಂಭಿಸಿದ್ದು, ಜನರು ಈ ಸೌಲಭ್ಯದ ಸದ್ಬಳಕೆ ಮಾಡ ಬೇಕೆಂದರು. ನಾವು ಮುಂದುವರಿದಂತೆ ಸಮಸ್ಯೆಗಳು ಹೆಚ್ಚುತ್ತಿವೆ; ಸಮಸ್ಯೆಗಳ ಪರಿಹಾರಕ್ಕೆ ಅಷ್ಟೇ ತ್ವರಿತವಾಗಿ ಪರಿಹಾರ ನೀಡಲು ನ್ಯಾಯಾಲಯ ಹಲವು ವಿನೂತನ ಕ್ರಮಗಳನ್ನು ಕೈಗೆತ್ತಿಕೊಂಡಿದೆ ಎಂದರು.
ಸಮಾಜದಲ್ಲಿ ಅನ್ಯಾಯವನ್ನು ಹಲವು ಕಾರಣಗಳಿಂದ ಸಹಿಸಿಕೊಂಡು ಶೋಷಣೆಗೊಳಗಾದ ವರ್ಗವಿದ್ದು, ನ್ಯಾಯರಥ ಮನೆಯ ಬಾಗಿಲಿಗೆ ಬರುವುದರಿಂದ ಇಂತಹ ಜನರು ನ್ಯಾಯ ಪಡೆಯುವ ಬಗ್ಗೆ ಚಿಂತಿಸಬಹುದಾಗಿದೆ ಎಂದು ಅವರು ಹೇಳಿದರು,
ಮಾಹಿತಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಯು.ಟಿ ಖಾದರ್ ಅವರು, ನಮ್ಮ ದೇಶದಲ್ಲಿ ಪ್ರತಿಯೊಂದಕ್ಕೂ ಕಾನೂನನ್ನು ರೂಪಿಸಲಾಗಿದ್ದು, ಸುವ್ಯವಸ್ಥಿತ ಸಾಮಾಜಿಕ ವ್ಯವಸ್ಥೆಗೆ ಕಾನೂನಿನ ಅಗತ್ಯವಿದೆ ಎಂದರು. ಕಾನೂನಿನ ಬಗ್ಗೆ ಉತ್ತಮ ಜ್ಞಾನವನ್ನು ಹೊಂದುವುದು ಬಹಳ ಅಗತ್ಯವಿದೆ ಎಂದ ಅವರು ಕಾನೂನಿನ ಜ್ಞಾನವಿಲ್ಲದೆ ಇರುವುದರಿಂದ ಇಂದು ಸಮಾಜದಲ್ಲಿ ಬಹಳಷ್ಟು ಸಮಸ್ಯೆಗಳು ಉದ್ಭವವಾಗುತ್ತಿದೆ. ಅಜ್ಞಾನದಿಂದಾಗುವ ತಪ್ಪುಗಳಿಗೆ ಪ್ರಚೋದನೆ ನೀಡದೆ ಈ ಬಗ್ಗೆ ಅರಿವು ನೀಡುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಸಾಮಾನ್ಯರಿಗೆ ಜನಪ್ರತಿನಿಧಿಗಳೇ ಮಾದರಿಯಾಗಬೇಕು. ಕಾನೂನಿನ ಅರಿವನ್ನು ಪಡೆದವರು ಆತ್ಮವಿಶ್ವಾಸದಿಂದ ಬಾಳಲು ಸಾಧ್ಯ ಎಂದು ಅವರು ಹೇಳಿದರು.
ಉಳ್ಳಾಲ ಪುರಸಭೆ ಅಧ್ಯಕ್ಷ ಯು.ಎ.ಇಸ್ಮಾಯಿಲ್ ಸ್ವಾಗತಿಸಿದರು. ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕರಾದ ಶೀನಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ತಾಲೂಕು ಪಂಚಾಯತ್ ಇ ಒ ಕಾಂತರಾಜ್ ಉಪಸ್ಥಿತರಿದ್ದರು.ರುಫೀನಾ ವೇಗಸ್ ಅನುಭವ ಹಂಚಿಕೊಂಡರು. ಬೀಡಿ ಕಾರ್ಮಿಕರಿಗೆ ನ್ಯಾಯವಾದಿ ದೇವದಾಸ್ ರಾವ್ ಅವರು ಕಾನೂನು ಕುರಿತಂತೆ ಮಾಹಿತಿ ನೀಡಿದರು. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಕುರಿತಂತೆ ನ್ಯಾಯವಾದಿ ರವೀಂದ್ರ ಮುನಿಪ್ಪಾಡಿ ಮಾಹಿತಿ ನೀಡಿದರು.ವಾಣಿ ವಿ ಆಳ್ವ ಕಾರ್ಯಕ್ರಮ ನಿರ್ವಹಿಸಿದರು. ಕೃಷ್ಣ ಮೂಲ್ಯ ಅವರು ಧನ್ಯವಾದ ಸಮರ್ಪಣೆ ಮಾಡಿದರು.