Tuesday, February 23, 2010

ಆರ್ ಟಿ ಐ ನಿಂದ ಭ್ರಷ್ಟಾಚಾರಮುಕ್ತ ವ್ಯವಸ್ಥೆ

ಮಂಗಳೂರು,ಫೆ.23:ಸಾರ್ವಜನಿಕ ಹಣವನ್ನು ವ್ಯಯಿಸುವ ಅಥವಾ ಸಾರ್ವಜನಿಕ ಸೇವೆಯನ್ನು ಪೂರೈಸುವ ಪ್ರಾಧಿಕಾರಗಳಿಂದ ಮಾಹಿತಿ ಪಡೆಯುವ ಹಕ್ಕನ್ನು ಚಲಾಯಿಸುವುದು ಆಡಳಿತದಲ್ಲಿ ಪ್ರಜೆಗಳ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುತ್ತದೆ. ಹೀಗಾದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಉತ್ತಮಗೊಳ್ಳಲು ಸಾಧ್ಯ ಎಂದು ಕರ್ನಾಟಕ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ರಾಬಿನ್ ಸನ್ ಡಿಸೋಜಾ ಅವರು ಹೇಳಿದರು.
ಅವರಿಂದು ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಮಾಧ್ಯಮ ಮತ್ತು ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳಿಗೆ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ವತಿಯಿಂದ ಏರ್ಪಡಿಸಲಾದ ಮಾಹಿತಿ ಹಕ್ಕಿನ ಕುರಿತ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು. ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆ ಆಡಳಿತದ ಗುಣಮಟ್ಟ ಮಾತ್ರ ಹೆಚ್ಚಿಸದೆ ಸರ್ಕಾರಿ ಕೆಲಸಗಳಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಪ್ರೇರೆಪಿಸುತ್ತದೆ.ಒಂದೇ ದಿನದಲ್ಲಿ ಕೇವಲ ಒಬ್ಬರಿಂದ ಬದಲಾವಣೆ ಸಾಧ್ಯವಿಲ್ಲ; ಆದರೆ ನ್ಯಾಯಾಂಗ ಹಾಗೂ ರಾಷ್ಟ್ರಪತಿ ಕಚೇರಿಯಲ್ಲಿರುವ ಕಡತಗಳ ಬಗ್ಗೆ ಸಾಮಾನ್ಯನಿಗೆ ತಿಳಿಯಲು ಮಾಹಿತಿ ಹಕ್ಕು ಕಾಯಿದೆಯಿಂದ ಸಾದ್ಯವಾಗಿದೆ ಎಂಬುದೇ ಕಾಯಿದೆಯ ಮಹತ್ವ ವನ್ನು ತಿಳಿಸುತ್ತದೆ ಎಂದು ವಿವರಿಸಿದರು.ಎರಡನೇ ಅಧಿವೇಶನದಲ್ಲಿ ಮಾಹಿತಿ ಹಕ್ಕನ್ನು ಸರ್ಕಾರೇತರ ಸಂಘ ಸಂಸ್ಥೆಗಳು ಬಳಸಿಕೊಳ್ಳುವ ಬಗ್ಗೆ ಸವಿವರ ಉಪನ್ಯಾಸ ನೀಡಿದರು. ಶಿವಮೊಗ್ಗ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಗದೀಶ್ ಅವರು ಆರ್ ಟಿ ಐ ಮಾಧ್ಯಮ ಮತ್ತು ಸರ್ಕಾರೇತರ ಸಂಘಟನೆಗಳ (ಎನ್ ಜಿಒ)ಗಳ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.ಎಟಿಐ ನ ಕೆ ಎಂ ಪ್ರಸಾದ್ ಮತ್ತು ಸಿ.ಅಶೋಕ್ ಅವರು ಉಪಸ್ಥಿತರಿದ್ದು, ಕಾರ್ಯಕ್ರಮ ನಿರ್ವಹಿಸಿದರು.
22 ಮತ್ತು 23ರಂದು ಡಿಟಿಐನಲ್ಲಿ ಸರ್ಕಾರಿ ಅಧಿಕಾರಿಗಳಿಗೂ ಎರಡು ದಿನಗಳ ತರಬೇತಿಯನ್ನು ನೀಡಲಾಯಿತು. ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ತರಬೇತಿಯಲ್ಲಿ ಪಾಲ್ಗೊಂಡಿದ್ದರು.