Tuesday, February 16, 2010

ಸ್ವಾವಲಂಬಿ ಯೋಜನೆ ರೂಪಿಸಲು ಸರಕಾರಕ್ಕೆ ವರದಿ: ದ್ವಾರಕನಾಥ್

ಮಂಗಳೂರು ಫೆಬ್ರವರಿ 16: (ಕರ್ನಾಟಕ ವಾರ್ತೆ)- ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಿ ಸ್ವಾವಲಂಬಿ ಬದುಕನ್ನು ರೂಪಿಸಲು ನೆರವಾಗಲು ರುಡ್ಸೆಟ್ ಮಾದರಿಯಲ್ಲಿ ತರಬೇತಿ ನೀಡಲು ಸರಕಾರಕ್ಕೆ ಸಮಗ್ರ ವರದಿ ನೀಡುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಸಿ.ಎಸ್. ದ್ವಾರಕಾನಾಥ್ ತಿಳಿಸಿದ್ದಾರೆ.
ಅವರಿಂದು ಮಡಂತ್ಯಾರು, ಬೆಳ್ತಂಗಡಿ, ಮಚ್ಚಿನ, ಉಜಿರೆ ಇಲ್ಲಿನ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಉಜಿರೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದನ್ನು ವಿದ್ಯಾರ್ಥಿನಿಯರು ಪ್ರಸ್ತಾಪಿಸಿದಾಗ, ಪ್ರಸಕ್ತ ಸಮಸ್ಯೆಗಳ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿ ತಿಂಗಳಿಗೊಮ್ಮೆ ವಿದ್ಯಾರ್ಥಿನಿ ನಿಲಯಗಳಿಗೆ ಮಹಿಳಾ ವೈದ್ಯಾಧಿಕಾರಿ ಭೇಟಿ ನೀಡಿ ವಿದ್ಯಾರ್ಥಿನಿಯರ ತಪಾಸಣೆ ನಡೆಸಬೇಕು ಹಾಗೂ ವಾರಕ್ಕೊಮ್ಮೆ ಸ್ಥಳೀಯ ಆಸ್ಪತ್ರೆಗಳ ದಾದಿಯರು ವಿದ್ಯಾರ್ಥಿನಿ ನಿಲಯಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದರು. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಗಳ ವಿದ್ಯಾರ್ಥಿ ನಿಲಯಗಳು ಉತ್ತಮವಾಗಿದ್ದು, ಸರಕಾರದಿಂದ ನಿಲಯಗಳ ನಿರ್ವಹಣೆಗೆ ಅಗತ್ಯ ಅನುದಾನ ಬಿಡುಗಡೆಗೆ ಒತ್ತಾಯಿಸುವುದಾಗಿ ಹೇಳಿದರು. ರುಡ್ಸೆಟ್ ಭೇಟಿ ನೀಡಿದ ಆಯೋಗದ ಅಧ್ಯಕ್ಷರು, ಡಾ.ವೀರೇಂದ್ರ ಹೆಗಡೆಯವರೊಡನೆ ತರಬೇತಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಿದರು.