ಮಂಗಳೂರು,ಡಿಸೆಂಬರ್.08:ದೇವಸ್ಥಾನಗಳಲ್ಲಿ ಪೂಜೆ ಮಾಡುವ ಅರ್ಚಕರ ಭಾವುಕತೆ, ಅವರ ಸದ್ವಿಚಾರಗಳು, ಸಂಘರ್ಷ ರಹಿತ ಪರಿಸರ, ಜಾತಿವಾದಗಳಿಂದ ಹೊರತಾದ ವಿಚಾರಧಾರೆ, ನಿಷ್ಕಲ್ಮಷ ಭಕ್ತಿ ಮೂಡುವ ಕೆಲಸಗಳು ಕ್ಷೇತ್ರ ವಠಾರದಲ್ಲಿ ನಡೆಯಬೇಕು. ಈ ಮೂಲಕ ಸಮಾಜ ಕಟ್ಟುವ ಕೆಲಸಗಳು ದೇವಾಲಯಗಳಿಂದ ಪ್ರಾರಂಭವಾಗಬೇಕು ಎಂದು ರಾಜ್ಯ ಮುಜರಾಯಿ ಮತ್ತು ಬಂದರು ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು.
ನಗರದ ಪುರಭವನದಲ್ಲಿ ಧಾರ್ಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಇದರ ಆಶ್ರಯದಲ್ಲಿ ಜಿಲ್ಲೆಯಲ್ಲಿರುವ ದೇವಸ್ಥಾನ, ಗರೋಡಿ, ಭಜನಾ ಮಂದಿರಗಳ ಅರ್ಚಕರ, ಸದಸ್ಯರ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರ ಒಂದು ದಿನದ ಸಮಾವೇಶ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಯಾಯ ಪ್ರದೇಶದಲ್ಲಿರುವ ದೇವಾಲಯಗಳಲ್ಲಿ ಪೂಜೆ, ಪುನಸ್ಕಾರಗಳು ವಿಭಿನ್ನವಾಗಿದ್ದರೂ ಎಲ್ಲರ ಆಶಯ ಉತ್ತಮ ಸಮಾಜ ನಿರ್ಮಾಣವೇ ಪ್ರಥಮ ಗುರಿಯಾಗಿದೆ.ಮುಜರಾಯಿ ವ್ಯಾಪ್ತಿಯೊಳಪಡುವ 34,266 ದೇವಾಲಯಗಳ ಸಿಬ್ಬಂದಿಗಳಿಗೆ 6ನೇ ವೇತನ ಆಯೋಗದ ವರದಿ ಶೀಘ್ರದಲ್ಲೇ ಜಾರಿಯಾಗಲಿದೆ.ಜಿಲ್ಲೆಯ 14 ದೇವಾಲಯಗಳ ಸಿಬ್ಬಂದಿಗಳಿಗೆ ಗೃಹ ನಿರ್ಮಾಣ ಮತ್ತು ಗುರುತು ಚೀಟಿ ವಿತರಣೆಗೆ ಆದ್ಯತೆ ನೀಡಲಾಗಿದೆ. 25 ದೇವಾಲಯಗಳನ್ನು ಪ್ರವಾಸಿ ದೇವಾಲಯಗಳನ್ನಾಗಿ ಆಯ್ಕೆ ಮಾಡಿ, ಇಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪ್ರತಿ ಕ್ಷೇತ್ರಕ್ಕೆ 1ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಜೊತೆಗೆ, ಅರ್ಚಕರ ಸ್ಥಿತಿಗತಿಗಳನ್ನು ಅರಿತುಕೊಂಡು ಆರ್ಥಿಕವಾಗಿ ಅವರನ್ನು ಸಬಲರನ್ನಾಗಿ ಮಾಡುವ ಕಾರ್ಯ ಕೂಡ ಜೊತೆಯಲ್ಲಿ ನಡೆಯಲಿದೆ ಎಂದರು.
ಅಧ್ಯಕ್ಷತೆಯನ್ನು ಉಪಸಭಾಪತಿ ಎನ್.ಯೋಗೀಶ್ ಭಟ್ ವಹಿಸಿದ್ದರು.ಇದೇ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅರ್ಚಕರಿಗೆ ಗುರುತು ಪತ್ರ ಹಾಗೂ ಆಯ್ದ ಅರ್ಚಕರನ್ನು ಸನ್ಮಾನಿಸಲಾಯಿತು. ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಮಾರ್ಗದರ್ಶಿ ಉಪನ್ಯಾಸ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಮೋನಪ್ಪ ಭಂಡಾರಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಅಶೋಕ್, ಎಂಡೋಮೆಂಟ್ ತಹಶೀಲ್ದಾರ್ ಪ್ರಭಾಕರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ.ಸೋಂದಾ ಭಾಸ್ಕರ್ ಭಟ್ ಸ್ವಾಗತಿಸಿದರು.