Monday, December 31, 2012

30 ರೈತ ಸಂಪರ್ಕ ರಸ್ತೆಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭ: ಕೆ.ಕೃಷ್ಣರಾಜ ಹೆಗ್ಡೆ.

ಮಂಗಳೂರು, ಡಿಸೆಂಬರ್.31:-ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ 2012-13 ನೇ ಸಾಲಿನಲ್ಲಿ 30 ಗ್ರಾಮೀಣ ರೈತ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆಯೆಂದು ಎಪಿಎಂಸಿಯ ಅಧ್ಯಕ್ಷರಾದ ಕೆ.ಕೃಷ್ಣರಾಜ ಹೆಗ್ಡೆ ಅವರು ತಿಳಿಸಿದ್ದಾರೆ. 
     ಅವರು ಇಂದು ಬೈಕಂಪಾಡಿಯ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.2010-11 ಮತ್ತು 2011-12 ನೇ ಸಾಲಿಗೆ ಸುಮಾರು ರೂ.44.50 ಲಕ್ಷ ವೆಚ್ಚದಲ್ಲಿ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಎಪಿಎಂಸಿಯ ವಾರ್ಷಿಕ ಸಂಪನ್ಮೂಲದ ಹಣದಿಂದ ರೈತರಿಗೆ ಹೊಲದಿಂದ ಹೊಲಕ್ಕೆ ರಸ್ತೆ ನಿರ್ಮಾಣ ಕಾರ್ಯಕ್ರಮದಂತೆ ಪ್ರತೀ ವರ್ಷ ರೂ.30.00 ಲಕ್ಷಗಳನ್ನು ರಸ್ತೆ ನಿರ್ಮಾಣಗಳಿಗೆ ವೆಚ್ಚ ಮಾಡಲಾಗಿದೆಯೆಂದರು.ಇದಲ್ಲದೆ ಎಪಿಎಂಸಿ ಸದಸ್ಯರ ಸೂಚನೆ ಮೇರೆಗೆ ಅಗತ್ಯವಿರುವ ಕಡೆ ರಸ್ತೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದರು.ರೂ.12 ಕೋಟಿ ವೆಚ್ಚದ ನಬಾರ್ಡ್ ಸಹಾಯಧನ ಕಾಮಗಾರಿ ಯೊಜನೆಯಂತೆ ಮುಖ್ಯ ಮಾರುಕಟ್ಟೆ ಪ್ರಾಂಗಣದ ಬೈಕಂಪಾಡಿಯಲ್ಲಿ ರೂ.12.10 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ನಬಾರ್ಡ್ ಸಂಸ್ಥೆಯಿಂದ ರೂ.3.00 ಕೋಟಿ ಸಬ್ಸಿಡಿಯನ್ನು ಪಡೆಯಲು ಕ್ರಮ ವಹಿಸಲಾಗಿದೆಯಲ್ಲದೆ 2012-13 ನೇ ಸಾಲಿನಲ್ಲಿ ರೂ.61.50 ಲಕ್ಷ ವೆಚ್ಚದಲ್ಲಿ ಬೈಕಂಪಾಡಿ ಮಾರುಕಟ್ಟೆ ಪ್ರಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ.
ಚುನಾಯಿತ ಸಮಿತಿ ಅಸ್ಥಿತ್ವಕ್ಕೆ ಬರುವ ಮುನ್ನ ಬೈಕಂಪಾಡಿ ಪ್ರಾಂಗಣದಲ್ಲಿ ಕೇವಲ 58 ವರ್ತಕರು ಇದ್ದರು. ಆದರೆ ಇಂದು ಇಲ್ಲಿ 250 ಜನ ವರ್ತಕರು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಹಂಚಿಕೆಯಾದ ನಿವೇಶನಗಳನ್ನು 122 ಜನ ವರ್ತಕರು ತಮ್ಮ ಸ್ವಂತ ಕಟ್ಟಡ ಹೊಂದಿ ವಹಿವಾಟು ನಡೆಸುತ್ತಿದ್ದಾರೆ.
ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯಲ್ಲಿರುವ ಎಪಿಎಂಸಿಯ 1.10 ಎಕರೆ ಜಾಗವನ್ನು ರಾಜ್ಯ ಸರಕಾರ ನಿರೂಪಿಸಿದ ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆಯೆಂದರು.ಕರ್ನಾಟಕ ರಾಜ್ಯ ಮಾರಾಟ ಇಲಾಖೆ ಮಂಗಳೂರು ಎಪಿಎಂಸಿಗೆ ನಿಗಧಿಡಿಸಿದ್ದ ರೂ.5.90 ಕೋಟಿ ಮಾರುಕಟ್ಟೆ ಶುಲ್ಕ ವಸೂಲಾತಿಗೆ ಈಗಾಗಲೇ 3.16 ಕೋಟಿ ವಸೂಲು ಮಾಡಲಾಗಿದೆಯೆಂದರು.
ಪತ್ರಿಕಾಗೋಷ್ಟಿಯಲ್ಲಿ ಎಪಿಎಂಸಿ ಕಾರ್ಯದರ್ಶಿ ರಾಮಚಂದ್ರ ರೆಡ್ಡಿ,ಉಪಾಧ್ಯಕ್ಷರಾದ ಪ್ರಶಾಂತ್ ಗಟ್ಟಿ ಹಾಗೂ ಇತರೆ ಸದಸ್ಯರು ಹಾಜರಿದ್ದರು.