ಮಂಗಳೂರು, ಜೂನ್.12 : ಇತರ ಮಕ್ಕಳು ನಮ್ಮ ಮಕ್ಕಳಂತೆ ಎಂಬ ವಿಶಾಲ ಮನೋಭಾವದ ಕೊರತೆಯಿಂದಾಗಿ ವಿಶ್ವದಲ್ಲಿ ಪ್ರತೀ ವರ್ಷ ಒಂದು ಮಿಲಿಯನ್ ಗೂ ಅಧಿಕ ಮಕ್ಕಳು ಲೈಂಗಿಕ ತೃಷೆ, ಭಿಕ್ಷಾಟನೆ ,ಅಪಾಯಕಾರಿ ಕೆಲಸ ಇವೇ ಮೊದಲಾದ ದುಷ್ಕಾರ್ಯಗಳಿಗೆ ಬಳಕೆಯಾಗುವ ಮೂಲಕ ಅವರ ಬದುಕು ಶೋಚನೀಯವಾಗುತ್ತಿದೆಯೆಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಅಶೋಕ್ ಜಿ.ನಿಜಗಣ್ಣನವರ್ ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಮಂಗಳೂರು ನಗರದ ಪುರಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ದ.ಕ. ಜಿಲ್ಲಾಡಳಿತ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ, ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ `` ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ'' ಉದ್ಘಾಟಿಸಿ ಅವರು ಮಾತನಾಡಿದರು.
06 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕಾಯಿದೆ ಜಾರಿಗೆ ಬಾರದ ಹೊರತು ಬಾಲ ಕಾರ್ಮಿಕ ಪದ್ಧತಿಯಂತಹ ಸಾಮಾಜಿಕ ಅನಿಷ್ಠವನ್ನು ಹೋಗಲಾಡಿಸಲು ಸಾಧ್ಯವಿಲ್ಲ ಎಂದ ನ್ಯಾಯಾಧೀಶರು ಮಕ್ಕಳಿಗೆ ಅವರ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು.ಅವರ ಬಾಲ್ಯವನ್ನು ಅನುಭವಿಸುವ ಅವಕಾಶವನ್ನು ಒದಗಿಸುವುದು ಸಮಾಜದ ಜವಾಬ್ದಾರಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ನಮ್ಮ ಮಕ್ಕಳಲ್ಲಿ ಶ್ರಮ ಸಂಸ್ಕೃತಿಯನ್ನು ರೂಢಿಸಿದಲ್ಲಿ ಅವರು ಸಣ್ಣ ಸಣ್ಣ ಕೆಲಸಗಳಿಗೂ ಇತರರನ್ನು ಅವಲಂಬಿಸುವುದನ್ನು ತಪ್ಪಿಸಿ ಸ್ವಾವಲಂಬಿ ಬದುಕು ರೂಢಿಸಿಕೊಳ್ಳುವಂತೆ ಮಾಡಬೇಕಿದೆಯೆಂದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ದ.ಕ. ಜಿಲ್ಲೆ ವಿಶೇಷವಾಗಿ ಮಂಗಳೂರಿನಲ್ಲಿ ವಿವಿಧ ಕಟ್ಟಡ ಕಾಮಗಾರಿಗಳಿಗೆ ,ವ್ಯಾಪಾರ ವಹಿವಾಟುಗಳಿಗೆ ಆಗಮಿಸಿರುವ ವಲಸಿಗರ ಮಕ್ಕಳು ಬೀದಿ ಬದಿಯಲ್ಲಿ ಭಿಕ್ಷಾಟನೆ ಮಾಡುತ್ತಿದ್ದು,ಅವರನ್ನು ಶಿಕ್ಷಣದತ್ತ ಆಕರ್ಷಿಸಲು ಹಾಗೂ ಅವರಿಗೆ ಶೈಕ್ಷಣಿಕ ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆಯೆಂದರು.ಅಲ್ಲದೆ ಜಿಲ್ಲೆಯಲ್ಲಿ 137 ಶಾಲೆ ಬಿಟ್ಟ ಮಕ್ಕಳು ಇದ್ದು,ಇವರನ್ನು ಪುನ: ಶಾಲೆಗೆ ದಾಖಲಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚಿಸಿರುವುದಾಗಿ ತಿಳಿಸಿ,ಯಾರೇ ಮಕ್ಕಳು ಶಾಲೆಯಿಂದ ವಂಚಿತರಾಗಿರುವುದು ಕಂಡು ಬಂದಲ್ಲಿ ಅವರಿಗೆ ಅವರ ಪೋಷಕರಿಗೆ ಅರಿವು ಮೂಡಿಸಿ ಶೈಕ್ಷಣಿಕ ಸಂಸ್ಥೆಗಳಿಗೆ ದಾಖಲಿಸುವಂತೆ ಸಾರ್ವಜನಿಕರನ್ನು ವಿನಂತಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ನಗರದ ಉಪ ಪೊಲೀಸ್ ಆಯುಕ್ತ ಧರ್ಮಯ್ಯ ,ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಈ ಸಂದರ್ಭದಲ್ಲಿ ಮಾತನಾಡಿದರು. ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್ ಅವರು ಬಾಲ ಕಾರ್ಮಿಕ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಜಿ.ಎನ್.ಸುಬ್ರಮಣ್ಯ ಅವರು ಉಪಸ್ಥಿತರಿದ್ದರು. ಪ್ರಾಸ್ತಾವಿಕವಾಗಿ ಕಾರ್ಮಿಕಾಧಿಕಾರಿ ನಾಗೇಶ್ ಅವರು ಮಾತನಾಡಿ ಭಾರತದಲ್ಲಿ 60 ಮಿಲಿಯನ್ ಬಾಲಕಾರ್ಮಿಕರಿದ್ದು ಅವರಲ್ಲಿ 12.6 ಮಿಲಿಯನ್ ಮಕ್ಕಳು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುತ್ತಿದ್ದಾರೆ. ಇವರಲ್ಲಿ ಶೇ.80 ರಷ್ಟು ಬಾಲ ಕಾರ್ಮಿಕರು ಗ್ರಾಮೀಣ ಪ್ರದೇಶದವರಾಗಿದ್ದರೆ ಶೇಕಡಾ 20 ರಷ್ಟು ಬಾಲ ಕಾರ್ಮಿಕರು ನಗರ ಪ್ರದೇಶಗಳಲ್ಲಿದ್ದಾರೆಂದು ತಿಳಿಸಿದರು. ಪ್ರಜ್ಞಾ ಪುನರ್ವಸತಿ ಶಾಲೆಯ ಬಾಲಕಾರ್ಮಿಕರಾಗಿದ್ದು,ಇದೀಗ ಅದರಿಂದ ಮುಕ್ತಿ ಹೊಂದಿ ಸ್ವತಂತ್ರವಾಗಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಬಾಲ ಕಾರ್ಮಿಕಪದ್ಧತಿ ವಿರೋಧಿ ಕುರಿತ ಗೀತೆಯನ್ನು ಹಾಡಿದರು.