ಮಂಗಳೂರು, ಜೂನ್.12: ಜನನಪೂರ್ವ ಲಿಂಗನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆಯಡಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕಾನೂನು ಪ್ರಕಾರ ಕೈಗೊಳ್ಳುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ. ಶ್ರೀರಂಗಪ್ಪ ಹೇಳಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿದ ಅಧಿಕಾರಿಗಳು, ಜನನಪೂರ್ವ ಲಿಂಗನಿರ್ಣಯ ತಡೆ ಕಾಯಿದೆ ಬಗ್ಗೆ ನಿರ್ಲಕ್ಷ್ಯ ಸಲ್ಲ. ಈ ಸಂಬಂಧ ತಮ್ಮ ಕ್ಲಿನಿಕ್ ಗಳಲ್ಲಿ ವೈದ್ಯರು ಕಾನೂನನ್ನು ಪಾಲಿಸಬೇಕು ಎಂದು ಸೂಚಿಸಿದರು.
ಸ್ಕ್ಯಾನಿಂಗ್ ಮಿಷಿನ್ ಹೊಂದಿರುವವರು ಕಡ್ಡಾಯವಾಗಿ ಇಲಾಖೆಯಿಂದ ಶೀಘ್ರದಲ್ಲೇ ಆಯೋಜಿಸಲಾಗುವ ತರಬೇತಿ/ಅರಿವು ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು; ಫಾರ್ಮ್ ಬಿ ಯನ್ನು ಹೊಂದಿರಬೇಕು. ತಪಾಸಣೆ ವೇಳೆ ಸೂಕ್ತ ದಾಖಲೆಗಳನ್ನು ನೀಡದಿದ್ದರೆ ಕ್ರಮ ಅನಿವಾರ್ಯ ಎಂದು ತಿಳಿಸಿದ್ದಾರೆ.
ಜನನಪೂರ್ವ ಲಿಂಗನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ರೂಪಿಸಬೇಕಾದ ಯೋಜನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಯಿತು. ಶಾಲಾ ಕಾಲೇಜುಗಳಲ್ಲಿ ಈ ಸಂಬಂಧ ಕ್ಲಬ್ ರಚಿಸುವ, ಸಣ್ಣ ಸಣ್ಣ ತಂಡಗಳನ್ನು ರಚಿಸಿ ಪರಿಣಾಮಕಾರಿಯಾಗಿ ಮಾಹಿತಿಯನ್ನು ನೀಡುವ ಬಗ್ಗೆಯೂ ಸಭೆ ನಿರ್ಧರಿಸಿತು. ಮುಂದಿನ ಸಭೆಯನ್ನು ಆಗಸ್ಟ್ 17ರಂದು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕಿ ಹಾಗೂ ಸಮಿತಿಯ ಅಧ್ಯಕ್ಷರಾಗಿರುವ ಡಾಕ್ಟರ್ ಶಕುಂತಲಾ, ನ್ಯಾಯವಾದಿಗಳಾದ ರಾಜೇಶ್ ಕೆ ಜಿ., ಡಾ ಯು ಆರ್ ಶೆಣೈ, ಎಸ್ ಕೆ ಆರ್ ಡಿ ಪಿಯ ಮಂಗಳೂರು ತಾಲೂಕು ಯೋಜನಾಧಿಕಾರಿ ರಾಘವ, ಎಸ್ ಕೆ ಆರ್ ಡಿ ಪಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮ ಸಮನ್ವಯಾಧಿಕಾರಿ ಪದ್ಮಾವತಿ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನ ನಿರ್ದೇಶಕಿ ಪ್ರೊ. ಹಿಲ್ಡಾ ರಾಯಪ್ಪನ್, ಆರ್ ಸಿ ಹೆಚ್ ಡಾಕ್ಟರ್ ರುಕ್ಮಿಣಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪಾಪೇಗೌಡ ಉಪಸ್ಥಿತರಿದ್ದರು.