Friday, June 1, 2012

ಜೂನ್ 5,ವಿಶ್ವ ಪರಿಸರ ದಿನಾಚರಣೆ:ಪೂರ್ವಭಾವೀ ಸಭೆ

ಮಂಗಳೂರು, ಜೂನ್, 01:ವಿಶ್ವ ಪರಿಸರ ದಿನಾಚರಣೆಯನ್ನು ಜೂನ್ 5 ರಂದು ಅತ್ಯಂತ ಅರ್ಥಗರ್ಭಿತವಾಗಿ ಮಂಗಳೂರು ನಗರದಲ್ಲಿ ಆಚರಿಸಲು ಇಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
  ಜೂನ್ 5 ರಂದು ಬೆಳಿಗ್ಗೆ 8 ಗಂಟೆಗೆ ಮಂಗಳೂರು ನಗರದ ಟ್ಯಾಗೋರ್ ಪಾರ್ಕಿನಿಂದ ಸುಮಾರು 800 ಕ್ಕೂ ಹೆಚ್ಚು ಶಾಲಾ ಕಾಲೇಜು ಮಕ್ಕಳಿಂದ ಪರಿಸರ ಸಂರಕ್ಷಣೆ ಕುರಿತ ಘೋಷಣೆಗಳನ್ನು ಹೊತ್ತ ಜಾಥಾ ಹೊರಡಲಿದ್ದು, ಜಾಥಾ ಪುರಭವನಕ್ಕೆ ಆಗಮಿಸಲಿದೆ. ನಂತರ ಬೆಳಿಗ್ಗೆ 8.30 ರಿಂದ ಪುರಭವನದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಿದ್ದು,ಶಾಲಾ ಮಕ್ಕಳಿಗೆ ಏರ್ಪಡಿಸಿರುವ ಪ್ರಬಂಧ ಸ್ಪರ್ಧೆಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.
   ನಗರದ  ವಾರ್ಡ್ ಒಂದರಲ್ಲಿ ಆಯ್ದ 100 ಮನೆಗಳಿಗೆ ತ್ಯಾಜ್ಯ ಸಂಗ್ರಹಕ್ಕೆ ಸಂಗ್ರಹ ಟಿನ್ ಗಳನ್ನು ವಿತರಿಸುವ ಕಾರ್ಯಕ್ರಮ ಇದೆ. ಒಂದು ಸಾವಿರ ವಿವಿಧ ಹಣ್ಣಿನ ಹಾಗೂ ಇತರೆ ಸಸಿಗಳನ್ನು ಶಾಲಾ ಮಕ್ಕಳಿಗೆ ವಿತರಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಈ ವರ್ಷದ ವಿಶ್ವ ಪರಿಸರ ದಿನಾಚರಣೆ ಘೋಷ ವಾಕ್ಯ `` ಹಸಿರು ಆರ್ಥಿಕತೆ '' ಕುರಿತಂತೆ ಮಕ್ಕಳಿಗೆ ಉಪನ್ಯಾಸ ಏರ್ಪಡಿಸಿದೆ.
 ಪರಿಸರ ದಿನಾಚರಣೆಯಲ್ಲಿ ನಾಗರಿಕರೆಲ್ಲರೂ ಹುಮ್ಮನಸ್ಸಿನಿಂದ ಭಾಗವಹಿಸಿ ಪರಿಸರ ಉಳಿಸಲು ಮುಂದಾಗಬೇಕೆಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ. ದಯಾನಂದ ಹಾಗೂ ಇತರೇ ಜಿಲ್ಲಾ ಮಟ್ಟದ ಅಧಿಕಾರಿಗಳು ಮುಂತಾದವರು ಭಾಗವಹಿಸಿದ್ದರು.