ಮಂಗಳೂರು,ಜೂನ್. 23 :ಕರ್ನಾಟಕ ರಾಜ್ಯದ ಕರಾವಳಿ ತೀರ ಪ್ರದೇಶದಲ್ಲಿ ಪ್ರತೀ ವರ್ಷ
ಉಂಟಾಗುವ ಸಮುದ್ರ ಕೊರೆತವನ್ನು ತಪ್ಪಿಸಲು ಕಲ್ಲುಗೋಡೆ ನಿರ್ಮಿಸುವ ಬದಲು ಹಸಿರು ಕವಚ ಯೋಜನೆಯಡಿ 160 ಕಿಮೀ. ಉದ್ದದ ಕರಾವಳಿಯಲ್ಲಿ ಮರಗಿಡಗಳನ್ನು ಬೆಳೆಸುವ ಯೋಜನೆಯನ್ನು ಪಶ್ಚಿಮಘಟ್ಟ ಕಾರ್ಯಪಡೆ ಹಮ್ಮಿಕೊಂಡಿದೆಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು ತಿಳಿಸಿದ್ದಾರೆ.
ಅವರು ಇಂದುಪಶ್ಚಿಮಘಟ್ಟ ಕಾರ್ಯಪಡೆ ,ಕರ್ನಾಟಕ ಸಕಾರ ಹಾಗೂ ಕರ್ನಾಟಕ ಅರಣ್ಯ ಇಲಾಖೆ,ಮಂಗಳೂರು ವಿಭಾಗ ಇವರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತೆಂಕಿಲದ ಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ವೃಕ್ಷಾರೋಪಣ ಅಭಿಯಾನ ಉದ್ಘಾಟಿಸಿ ಮಾತನಾಡಿದರು.
ವಿಶ್ವದ 15 ಪ್ರಮುಖ ಪರಿಸರ ತಾಣಗಳಲ್ಲಿ ಮಹಾರಾಷ್ಟ್ರದಿಂದ ಕನ್ಯಾಕುಮಾರಿ ವರೆಗೂ ಹಬ್ಬಿರುವ ಪಶ್ಚಿಮಘಟ್ಟಗಳು ಒಂದು ಜಿಲ್ಲೆಯ ಅಪರೂಪವಾದ ಜೀವ ಸಂಕುಲ.ಮರಗಿಡ ಬಳ್ಳಿ ಮುಂತಾದವುಗಳನ್ನು ನಾವು ರಕ್ಷಿಸಬೇಕಿದೆ.ಪಶ್ಚಿಮಘಟ್ಟ ಅನೇಕ ಜೀವನದಿಗಳ ಉಗಮಸ್ಥಾನ.ನಮ್ಮ ರಾಜ್ಯದ 8 ಜಿಲ್ಲೆಗಳಲ್ಲಿ ಪಶ್ಚಿಮಘಟ್ಟ ಹಂಚಿಕೆಯಾಗಿದೆ ಎಂದರು.
ಅರಣ್ಯ ಇಲಾಖೆ ವತಿಯಿಂದ 16 ಲಕ್ಷ ವಿವಿಧ ಜಾತಿಯ ಸಸಿಗಳನ್ನು ಬೆಳೆಸಲಾಗಿದ್ದು,5 ಲಕ್ಷಕ್ಕೂ ಹೆಚ್ಚಿನ ಸಸಿಗಳನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ವಿತರಿಸುವುದಾಗಿ ತಿಳಿಸಿದರು.
ನಮ್ಮ ಮಕ್ಕಳಿಗೆ ನಮ್ಮ ನದಿ,ಬೆಟ್ಟ ಗುಡ್ಡ ಮರಗಿಡ,ಪ್ರಾಣಿ ಪಕ್ಷಿಗಳ ಬಗ್ಗೆ ತಿಳಿಸಬೇಕು. ನದಿಗಳಿಂದ ಕಾಡಿನಿಂದ ಏನೇನೂ ಪ್ರಯೋಜನಗಳಿವೆ ಎನ್ನುವುದನ್ನು ಮನದಟ್ಟು ಮಾಡಿಸಬೇಕೆಂದರು. ಪಶ್ಚಿಮಘಟ್ಟ ಕಾರ್ಯಪಡೆ ವತಿಯಿಂದ ಹಸಿರು ಸಮೃದ್ಧಿ ಗ್ರಾಮ ಯೋಜನೆಯ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ಗ್ರಾಮವನ್ನುಆಯ್ಕೆ ಮಾಡಿ ಅಲ್ಲಿ ಸಂಪೂರ್ಣ ಸಾವಯವ ಕೃಷಿ ಔಷಧ ಸಸ್ಯಗಳನ್ನು ಬೆಳೆಸುವುದರ ಮೂಲಕ ಹಸಿರು ಸಮೃದ್ಧಿ ಗ್ರಾಮವಾಗಿ ಪರಿವರ್ತಿಸಲಾಗುವುದೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಮಲ್ಲಿಕಾ ಪ್ರಸಾದ್ ಮಾತನಾಡಿ ತಮ್ಮ ಕ್ಷೇತ್ರದಲ್ಲಿ ಗಿಡ ಬೆಳೆಸಲು ತಮ್ಮ ಶಾಸಕರ ಅನುದಾನದಿಂದ ರೂ.2 ಲಕ್ಷ ನೀಡುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪುತ್ತೂರು ತಾಲೂಕುಪಂಚಾಯತ್ ಅಧ್ಯಕ್ಷರಾದ ಡಿ.ಶಂಭು ಭಟ್,ಪುತ್ತೂರು ಪುರಸಭಾ ಅಧ್ಯಕ್ಷರಾಧ ಶ್ರೀಮತಿ ಕಮಲಾನಂದ,ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಮತಿ ಎಚ್.ಎಸ್.ಸಾವಿತ್ರಿ ,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎಸ್.ಶಾಂತಪ್ಪ ಅವರು ಮಾತನಾಡಿದರು. ಉಪರಣ್ಯ ಸಂರಕ್ಷಣಾಧಿಕಾರಿ ಓ.ಪಾಲಯ್ಯ ಸ್ವಾಗತಿಸಿದರು.ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಔಷಧಿ ಸಸಿಗಳನ್ನು ವಿತರಿಸಲಾಯಿತು.