Saturday, June 23, 2012

ಜುಲೈ 5`ಶಾಲೆಗಾಗಿ ನಾವು-ನೀವು'

ಮಂಗಳೂರು,ಜೂನ್.23: ಜುಲೈ 5, 2012ರಂದು ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ `ಶಾಲೆಗಾಗಿ ನಾವು-ನೀವು' ಕಾರ್ಯಕ್ರಮ ನಡೆಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಪ್ರಸಕ್ತ ಸಾಲಿನಲ್ಲಿ ಸರ್ಕಾರ ಉತ್ತಮ ಶಿಕ್ಷಣಕ್ಕಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮದ ವಿವರ ಗಳನ್ನು ನೀಡಿದರು.
ಹಳೆಯ ಪಠ್ಯ ಕ್ರಮ ಗಳನ್ನೆಲ್ಲಾ ಬದಲಿಸಿ ಎಲ್ಲ ಮಕ್ಕಳಿಗೆ ಪ್ರಸಕ್ತ ಪರಿಸ್ಥಿತಿಗೆ ಪೂರಕವಾಗಿ, ಸಮಾನವಾಗಿ ಉತ್ತಮ ಪಠ್ಯಗಳನ್ನು ಒದಗಿಸಲು ಇಲಾಖೆ ಸಿದ್ಧತೆಗಳನ್ನು ನಡೆಸಿದೆ ಎಂದು ಸಚಿವರು ನುಡಿದರು.
ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಬೇಕು; ಮೂಲಭೂತ ಸೌಕರ್ಯಗಳಿರಬೇಕು ಎಂಬುದು ಕಾರ್ಯಕ್ರಮದ ಉದ್ದೇಶವಾಗಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ. ಜತೆಯಲ್ಲಿ ಸಮಾಜವನ್ನು ಈ ಪ್ರಕ್ರಿಯೆಯಲ್ಲಿ ಒಳಗೊಳ್ಳುವಂತೆ ಮಾಡುವುದು ಸರಕಾರದ ಗುರಿಯಾಗಿದೆ ಎಂದು ಶಿಕ್ಷಣ ಸಚಿವರು ಅಭಿಪ್ರಾಯಪಟ್ಟರು.
ಜುಲೈ 5ರಂದು ಸನ್ಮಾನ್ಯ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡರು ಸೇರಿದಂತೆ ಸಚಿವ ಸಂಪುಟದ ಎಲ್ಲಾ ಸಚಿವರು ಸರಕಾರಿ ಶಾಲೆಗಳಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಶಾಸಕರು ಹಾಗೂ ಎಲ್ಲಾ ಸ್ತರಗಳ ಜನಪ್ರತಿನಿಧಿಗಳು ಕೂಡಾ ಶಾಲೆಗಳ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುವರು ಎಂದು ಕಾಗೇರಿ ವಿವರಿಸಿದರು.
ಶಾಲೆಗಾಗಿ ನಾವು-ನೀವು ಕಾರ್ಯಕ್ರಮ ನಮ್ಮ ನಿಮ್ಮೆಲ್ಲರ ಕಾರ್ಯಕ್ರಮ.
ಅಂದು ಶಾಲೆಯಲ್ಲಿ ಪೋಷಕರೊಂದಿಗೆ ಸಂವಾದ, ಸಸಿ ನೆಡುವುದು, ಸೌಲಭ್ಯಗಳ ಅವಲೋಕನ ನಡೆಯಲಿದೆ. ಈ ಶೈಕ್ಷಣಿಕ ವರ್ಷದಲ್ಲಿ ಜಾರಿಯಾಗಿರುವ ಶಿಕ್ಷಣ ಹಕ್ಕು ಕಾಯ್ದೆಯ ಮಾಹಿತಿಯನ್ನು ಪೋಷಕರಿಗೆ ನೀಡಲಾಗುವುದು ಎಂದವರು ಹೇಳಿದರು.
ರಾಜ್ಯದ ಎಲ್ಲಾ ಅರ್ಹ ಮಕ್ಕಳು ಶಾಲೆಗೆ ದಾಖಲಾಗುವಂತೆ ನಾವೆಲ್ಲರು ನೋಡಿಕೊಳ್ಳಬೇಕು. ಹಾಗೆ ಶಾಲೆಗೆ ದಾಖಲಾದ ಮಕ್ಕಳು ಕನಿಷ್ಠ 8ನೇ ತರಗತಿಯವರೆಗೆ ಶಾಲೆ ಬಿಡದಂತೆ ನೋಡಿಕೊಳ್ಳುವುದು ಕೂಡಾ ಅಗತ್ಯವಾಗಿದೆ. ಇವೆರಡು ನಾವು ನಿರ್ವಹಿಸ ಬೇಕಾದ ಅತ್ಯಗತ್ಯ ಜವಾಬ್ದಾರಿಗಳು ಎಂದು ಕಾಗೇರಿ ಹೇಳಿದರು.
ಎಲ್ಲಾ ಮಕ್ಕಳು ಉನ್ನತ ಶಿಕ್ಷಣಪಡೆಯಬೇಕೆಂಬುದು ಸರಕಾರದ ಆಶಯ; ಪ್ರಸ್ತುತ ರಾಜ್ಯದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವವರ ಪ್ರಮಾಣ ಪ್ರತಿಶತ 12ರಿಂದ 13 ಮಾತ್ರ. ಮುಂದಿನ 5 ವರ್ಷಗಳಲ್ಲಿ ಈ ಪ್ರಮಾಣವನ್ನು ಶೇ.25ಕ್ಕೇರಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ `ಶಾಲೆಗಾಗಿ ನಾವು-ನೀವು' ಕಾರ್ಯಕ್ರಮದ ಮೌಲ್ಯಮಾಪನವನ್ನು ಜು.6ರಿಂದ 31ರವರೆಗೆ ಕೈಗೊಳ್ಳಲಾಗುವುದು ಎಂದರು. ಮಕ್ಕಳು ಶಿಕ್ಷಣ ಪಡೆ ಯುವುದನ್ನು ಪ್ರೋತ್ಸಾಹಿಸಲು ಹಾಗೂ ಎಲ್ಲರಿಗೂ ಶಿಕ್ಷಣ ದೊರೆಯಲಿ ಎಂಬ ಒತ್ತಾಸೆಯಿಂದ ವಲಸೆ ಮಕ್ಕಳಿಗೆ ಶಾಲೆಗಳು, ಹೊಸ ಪಠ್ಯಕ್ರಮ ಬೋಧನೆಗೆ ಶಿಕ್ಷಕರಿಗೆ ತರಬೇತಿ, 5 ಲಕ್ಷ ಸೈಕಲ್ ವಿತರಣೆ, ಸಕಾಲದಲ್ಲಿ ವೇತನ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಪದ್ಮನಾಭ ಕೊಟ್ಟಾರಿ ಉಪಸ್ಥಿತರಿದ್ದರು.