ಮಂಗಳೂರು,ಜೂನ್.07 : ಪ್ರಾಕೃತಿಕ ವಿಕೋಪ ನಿರ್ವಹಣೆ ಸಂದರ್ಭದಲ್ಲಿ ಅಧಿಕಾರಿಗಳು ಕಾನೂನಿನ ಜೊತೆಗೆ ಮಾನವೀಯವಾಗಿ ವಿಕೋಪ ಪೀಡಿತರ ಸಮಸ್ಯೆಗೆ ಸ್ಪಂದಿಸಬೇಕೆಂದು ಕರ್ನಾಟಕ ಸರ್ಕಾರದ ಕಂದಾಯ ಕಾರ್ಯದರ್ಶಿ ಅಮರ್ ನಾರಾಯಣ್ ಅವರು ಹೇಳಿದರು.
ಇಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಮಗ್ರ ವರದಿಯನ್ನು ಸಿದ್ಧಪಡಿಸಲು ಈಗಾಗಲೇ ಮೂರು ಜಿಲ್ಲೆಗಳೊಂದಿಗೆ ಸಮನ್ವಯತೆ ಸಾಧಿಸಿದ್ದು, ಕೇಂದ್ರಕ್ಕೆ ವರದಿ ಸಲ್ಲಿಕೆಗೆ ಮೊದಲು ಅಂತಿಮ ಕರಡಿನ ಬಗ್ಗೆ ಅಧಿಕಾರಿಗಳ ಅಭಿಪ್ರಾಯ ಪಡೆಯಲು ಈ ಸಭೆಯನ್ನು ಕರೆಯಲಾಗಿದೆ ಎಂದರು. ಜಿಲ್ಲೆಗಳು ಸಲ್ಲಿಸಿರುವ ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಕೋಪ ನಿರ್ವಹಣೆಗಿಂತ ಮುಂಜಾಗ್ರತಾ ಕ್ರಮಗಳಿಗೆ ಆದ್ಯತೆ ನೀಡಬೇಕೆಂದ ಅವರು, ಅಧಿಕಾರಿಗಳು ಮುಂಗಾರು ವೇಳೆಯಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತು ಫ್ಲೈ ಓವರ್ ಗಳ ಕಾಮಗಾರಿಗಳಿಂದ ಆಗುತ್ತಿರುವ ಕೃತಕ ನೆರೆಯ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಕಂದಾಯ ಕಾರ್ಯದರ್ಶಿಗಳ ಗಮನಸೆಳೆದರೆ, ಉಡುಪಿ ಜಿಲ್ಲಾಧಿಕಾರಿ ಡಾ. ರೆಜು ಅವರು ಉಡುಪಿಯಲ್ಲಿ ಸಮುದ್ರದ ಕೊರೆತದ ತೀವ್ರತೆಯನ್ನು ವಿವರಿಸಿದರು. ಉತ್ತರಕನ್ನಡದಲ್ಲಿ ನದಿಗಳ ಪ್ರವಾಹದ ಬಗ್ಗೆ ಸಿಇಒ ಜೋಶಿ ಅವರು ವಿವರಿಸಿದರು. ವಿಕೋಪ ನಿರ್ವಹಣೆಗೆ ವಿಕೋಪ ಎದುರಾಗುವ ಪ್ರದೇಶಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದು ಮುನ್ನೆಚ್ಚರಿಕಾ ಕ್ರಮಗಳನ್ನು ಅಳವಡಿಸಿ ಎಂದ ಕಾರ್ಯದರ್ಶಿಗಳು, ಪ್ರಾಣಹಾನಿ, ಆಸ್ತಿ ಹಾನಿ ಸಂದರ್ಭದಲ್ಲಿ ಮೂರರಿಂದ ಏಳು ದಿನಗಳೊಳಗೆ ತಾತ್ಕಾಲಿಕ ಪರಿಹಾರ ನೊಂದವರಿಗೆ ದೊರೆಯಬೇಕೆಂದರು.
ಮಂಗಳೂರು ಮಹಾನಗರಪಾಲಿಕೆ ಜನರ ಸಮಸ್ಯೆಗೆ ಸ್ಪಂದಿಸಲು ವಾಡ್ರ್ ಗೆ ಐದು ಜನರ ತಂಡದಂತೆ ಹಾಗೂ ರಾತ್ರಿಯ ವೇಳೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ 8 ಜನರ ತಂಡವನ್ನು ರಚಿಸಲಾಗಿದೆ ಎಂದು ಪಾಲಿಕೆ ಆಯುಕ್ತರು ಮಾಹಿತಿ ನೀಡಿದರು.
ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ವಿವರಿಸಿದರು.
ಕರಾವಳಿ ತೀರ ಪ್ರದೇಶದಲ್ಲಿ ಎಡಿಬಿ ಯೋಜನೆಯಡಿ ಸಮುದ್ರ ಕೊರೆತ ತಡೆಗೆ ಕೈಗೊಂಡಿರುವ ಶಾಶ್ವತ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಬಂದರು ಇಲಾಖೆಯವರು ತುರ್ತಾಗಿ ಸಮುದ್ರ ಕೊರೆತ ತಡೆಗೆ ಅಗತ್ಯ ಅನುದಾನದ ಪ್ರಸ್ತಾವವನ್ನು ಸರ್ಕಾರಕ್ಕೆ ಕೂಡಲೇ ಕಳುಹಿಸುವಂತೆ ಸೂಚಿಸಿದರು. ಸಮುದ್ರ ಕೊರೆತ ತಡೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಐದರಿಂದ ಆರು ಕೋಟಿ ತುರ್ತು ಅನುದಾನದ ಅಗತ್ಯವನ್ನು ಅಧಿಕಾರಿಗಳು ಕಾರ್ಯದರ್ಶಿಗಳ ಗಮನಕ್ಕೆ ತಂದರು.
ವಿಕೋಪ ಪರಿಹಾರದ ತುರ್ತು ಕಾಮಗಾರಿಗಳನ್ನು ಜಿಲ್ಲಾಧಿಕಾರಿಗಳ ಅನುಮೋದನೆಯಿಂದ ಪಡೆದುಕೊಳ್ಳುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಅಗ್ನಿಶಾಮಕ ದಳದ ನೆರವನ್ನು ಮಳೆಗಾಲದಲ್ಲಿ ಪರಿಣಾಮಕಾರಿಯಾಗಿ ಪಡೆದುಕೊಳ್ಳುವಂತೆ ಕಾರ್ಯದರ್ಶಿಗಳು ಹೇಳಿದರು. ಮೈಸೂರು ಆಡಳಿತ ತರಬೇತಿ ಸಂಸ್ಥೆಯ ಡಾ. ಧರ್ಮರಾಜ್ ಅವರು ಸಭೆಯಲ್ಲಿದ್ದರು. ವಿಕೋಪ ನಿರ್ವಹಣೆ ಯೋಜನೆ ತಯಾರಿಕೆಗೆ ಎಟಿಐ ಜಿಲ್ಲಾಡಳಿತಗಳಿಗೆ ಸಹಕರಿಸಬೇಕೆಂದು ಕಾರ್ಯದರ್ಶಿಗಳು ಹೇಳಿದರು.