ಮಂಗಳೂರು,ಜೂನ್.06:ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ` ಸಕಾಲ ' ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಎಪ್ರಿಲ್ ಹಾಗೂ ಮೇ ಮಾಹೆಗಳಲ್ಲಿ ಒಟ್ಟು 80,911 ಅರ್ಜಿಗಳು ಸ್ವೀಕೃತವಾಗಿದ್ದು, 69,713 ಅರ್ಜಿಗಳನ್ನು ತ್ವರಿತವಾಗಿ ವಿಲೇ ಮಾಡಲಾಗಿದೆ.
ಬಂಟ್ವಾಳ ತಾಲೂಕಿನಲ್ಲಿ ಮೇಲ್ಕಂಡ ಅವಧಿಯಲ್ಲಿ 8,655 ಅರ್ಜಿಗಳನ್ನು ಸ್ವೀಕರಿಸಿ 7,071 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ 4,829 ಅರ್ಜಿಗಳನ್ನು ಸ್ವೀಕರಿಸಿ 3,591 ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ. ರಾಜ್ಯದಲ್ಲಿ ಪೈಲಟ್ ಯೋಜನೆಯಡಿ ಮಾರ್ಚ್ ತಿಂಗಳಲ್ಲಿ ಸಕಾಲ ಯೋಜನೆ ಆರಂಭಗೊಂಡಿದ್ದ, ಪುತ್ತೂರು ತಾಲೂಕಿನಲ್ಲಿ 14,665 ಅರ್ಜಿಗಳನ್ನು ಸ್ವೀಕರಿಸಿ 13,489 ಅರ್ಜಿಗಳನ್ನು ವಿಲೇಗೊಳಿಸಿದೆ. ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು 49,022 ಅರ್ಜಿಗಳನ್ನು ಸ್ವೀಕರಿಸಿ 42,784 ಅರ್ಜಿಗಳನ್ನು ವಿಲೇ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಸುಳ್ಯ ತಾಲೂಕಿನಲ್ಲಿ ಅತೀ ಕಡಿಮೆ 3,740 ಅರ್ಜಿಗಳ ಸ್ವೀಕೃತವಾಗಿದ್ದು,2,778 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.
2012 ರ ಎಪ್ರಿಲ್ ಹಾಗೂ ಮೇ ಮಾಹೆಗಳಲ್ಲಿ ಸಕಾಲ ಯೋಜನೆಯಡಿ ಇಲಾಖಾವಾರು ಅರ್ಜಿಗಳ ಸ್ವೀಕಾರ ವಿವರ ಇಂತಿದೆ.
ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚು 29,178 ಅರ್ಜಿಗಳನ್ನು ಸ್ವೀಕರಿಸಿ,20,934 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ಅತೀ ಕಡಿಮೆ ಕೆ.ಎಸ್.ಆರ್.ಟಿ.ಸಿ.ಯಲ್ಲಿ 20 ಅರ್ಜಿಗಳು ಸ್ವೀಕೃತವಾಗಿದ್ದು, 16 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಉಳಿದಂತೆ ಸಾರಿಗೆ ಇಲಾಖೆ ಮಂಗಳೂರು ಹಾಗೂ ಪುತ್ತೂರು ಕಚೇರಿಗಳಲ್ಲಿ 22,454 ಅರ್ಜಿಗಳು ದಾಖಲಾಗಿದ್ದು,21,468 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಲ್ಲಿ 15,035 ಅರ್ಜಿಗಳನ್ನು ಸ್ವೀಕರಿಸಿ 14,221 ಅರ್ಜಿಗಳನ್ನು ಇತ್ಯರ್ಥ ಪಡಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿರುವ ಪುರಸಭೆಗಳಲ್ಲಿ ಮೇಲ್ಕಂಡ ಅವಧಿಯಲ್ಲಿ 2,975 ಅರ್ಜಿಗಳನ್ನು ಸ್ವೀಕರಿಸಿದ್ದರೂ ಬಾಕಿ ಇದ್ದ ಅರ್ಜಿಗಳು ಸೇರಿದಂತೆ ಒಟ್ಟು 4,499 ಅರ್ಜಿಗಳನ್ನು ವಿಲೆ ಮಾಡಿದೆ. ಮಂಗಳೂರು ಮಹಾನಗರಪಾಲಿಕೆಗೆ ಸಲ್ಲಿಸಿದ್ದ 2,869 ವಿವಿಧ ಅರ್ಜಿಗಳಲ್ಲಿ 2,602 ಅರ್ಜಿಗಳನ್ನು ವಿಲೇ ಮಾಡಲಾಗಿದೆ.ಪಂಚಾಯತ್ ರಾಜ್ ಇಲಾಖೆಯಲ್ಲಿ 1,248 ಅರ್ಜಿಗಳನ್ನು ಸ್ವೀಕರಿಸಿದ್ದು 928 ಅರ್ಜಿಗಳ ವಿಲೆಯಾಗಿದೆ. ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆಯಲ್ಲಿ 176 ಸ್ವೀಕಾರ 143 ವಿಲೇ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 467 ಅರ್ಜಿಗಳ ಸ್ವೀಕಾರವಾಗಿದ್ದು ಎಲ್ಲವನ್ನೂ ವಿಲೇ ಮಾಡಿ ಶೇಕಡಾ 100ರಷ್ಟು ಸಾಧನೆಗೈಯ್ಯಲಾಗಿದೆ.
" ಇಂದು ನಾಳೆ ಇನ್ನಿಲ್ಲ ,ಸಕಾಲದಲ್ಲಿ ಎಲ್ಲವೂ ಸಕಾಲಿಕವಾಗಿ ಇತ್ಯರ್ಥ ಇದೇ ಸರ್ಕಾರದ ಧ್ಯೇಯ ''