ಮಂಗಳೂರು, ಜೂ.16: ನಿಖರವಾದ ಮತ್ತು ಉತ್ತಮ ನಿರ್ವಹಣೆಗೆ ಒಳಪಟ್ಟ ಭೂದಾಖಲೆಗಳು ಆರ್ಥಿಕ ವ್ಯವಸ್ಥೆಯ ಸುಗಮ ನಿರ್ವಹನೆಗೆ ಅಗತ್ಯವಾಗಿದ್ದು, ಇನ್ನು ಮುಂದೆ ಎಲ್ಲ ಭೂವ್ಯವಹಾರಗಳಿಗೆ ಪ್ರಾಪರ್ಟಿ ಕಾರ್ಡ್ ಕಡ್ಡಾಯ ಮಾಡಲಾಗುವುದು ಎಂದು ಭೂಮಿ ಮತ್ತು ಯುಪಿಒಆರ್ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ಹೇಳಿದರು.
ಅವರಿಂದು ಮಂಗಳೂರಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ನಗರ ಆಸ್ತಿಗಳ ನಕ್ಷೆ ಮತ್ತು ಹಕ್ಕು ದಾಖಲೆಗಳನ್ನು ಸಿದ್ಧಪಡಿಸುವ ಯೋಜನೆ ಬಗ್ಗೆ ಸವಿವರ ಮಾಹಿತಿ ನೀಡಿದರಲ್ಲದೆ, ಮಂಗಳೂರಿನ ನಾಗರಿಕರು ಯೋಜನೆಯನ್ನು ಯಶಸ್ವಿ ಗೊಳಿಸಲು ಸಹಕರಿಸಬೇಕೆಂದು ಮನವಿ ಮಾಡಿದರು.ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಮೈಸೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ ಮತ್ತು ಬಳ್ಳಾರಿಗಳಲ್ಲಿ ಖಾಸಗಿ ಸಂಸ್ಥೆಯಾದ ಇನ್ಫೋಟೆಕ್ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ ಎಂದರು.
ಪ್ರಸ್ತುತ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಸಮರ್ಪಕವಾಗಿವೆ. ಆದರೆ ನಗರ ಆಸ್ತಿಗೆ ಯಾವುದೇ ಹಕ್ಕು ದಾಖಲೆ ಇಲ್ಲದಿರುವುದರಿಂದ ಸಾರ್ವಜನಿಕರು ಖಾತಾ ದಾಖಲೆಯನ್ನು ಹಕ್ಕು ದಾಖಲೆ ಎಂದು ಪರಿಗಣಿಸಲಾಗುತ್ತಿದೆ. ಆರ್ ಟಿ ಸಿ ದಾಖಲೆ ಇದ್ದರೂ ಬಹು ಅಂತಸ್ತಿನ ಕಟ್ಟಡಗಳಿಗೆ ಲಭ್ಯವಿರುವುದಿಲ್ಲ. ಜಮೀನಿಗೆ ಮಾತ್ರ ಲಭ್ಯವಾಗಿರುತ್ತದೆ. ಪಿಆರ್ ಕಾರ್ಡ್ ಜಾರಿಗೆ ಬಂದ ಮೇಲೆ ಭೂಪರಿವರ್ತಿತ ಜಮೀನಿಗೆ ಆರ್ ಟಿ ಸಿಯನ್ನು ಸ್ಥಗಿತಗೊಳಿಸಲಾಗುವುದು. ಭೂಪರಿವರ್ತಿತ ನಕ್ಷೆಯನ್ನು ಇನ್ನು ಮುಂದೆ ಯು ಪಿ ಆರ್ ನಿಂದ ತಯಾರಿಸಲಾಗುವುದು. ಮುಂದೆ ಎಲ್ಲಾ ಭೂ ವ್ಯವಹಾರಗಳಿಗೆ ಪಿಆರ್ ಕಾರ್ಡ್ ಕಡ್ಡಾಯವಾಗಲಿದೆ ಎಂದು ಅವರು ಹೇಳಿದರು.
ಈ ಯೋಜನೆಯಿಂದಾಗಿ ಆಸ್ತಿದಾರರು ಸೂಕ್ತ ನಕ್ಷೆಯೊಂದಿಗೆ ಶಾಸನಬದ್ಧ ಆಸ್ತಿ ದಾಖಲೆಗಳನ್ನು ಪಡೆಯಬಹುದಾಗಿದೆ. ಆಸ್ತಿಗಳ ಮಾರಾಟದ ಸಂದರ್ಭದಲ್ಲಿ ಪರಸ್ಪರ ಮೋಸ ಹೋಗುವುದು ತಪ್ಪಲಿದೆ. ಅಳತೆ, ಹಕ್ಕು ಮತ್ತು ಎಲ್ಲೆಗಳನ್ನೊಳಗೊಂಡಂತೆ ಪಾರದರ್ಶಕತೆಯೊಂದಿಗೆ ನಕ್ಷೆ ತಯಾರಿಸುವುದರಿಂದ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಲಿದೆ. ಅಕ್ರಮ ನೋಂದಣಿ ಕಾರ್ಯ ನಿಯಂತ್ರಿಸಬಹುದಾಗಿದೆ. ಗುತ್ತಿಗೆ ಅಡಮಾನಕ್ಕೆ ಒಳಪಡುವ ಆಸ್ತಿಗಳ ಮಾಹಿತಿ ಸಂಗ್ರಹಣೆ ಮತ್ತು ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಸರಕಾರಿ ಆಸ್ತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ಪತ್ತೆ ಹಚ್ಚಿ ಸಂರಕ್ಷಿಸಬಹುದಾಗಿದೆ. ಹಕ್ಕು ದಾಖಲೆಗಳ ಸಿದ್ಧಪಡಿಸುವಿಕೆಯು ಸುಗಮವಾದ ಆಸ್ತಿಯ ಹಕ್ಕು ವರ್ಗಾವಣೆಗೆ ಅವಕಾಶ ಕಲ್ಪಿಸುತ್ತದೆ. ಬ್ಯಾಂಕ್ ಮತ್ತು ಇತರೆ ಸಂಸ್ಥೆಗಳು ಸುಲಭವಾಗಿ ಸಾಲ ನೀಡಲು ಅವಕಾಶವಾಗುತ್ತದೆ. ಸುವ್ಯವಸ್ಥಿತ ಆಸ್ತಿ ದಾಖಲೆಗಳ ನಿರ್ವಹಣೆ ನಗರ ಪ್ರದೇಶಗಳ ಭೂವ್ಯಾಜ್ಯಗಳನ್ನು ನಿವಾರಿಸಲಿದೆ ಎಂದ ಅವರು ಯೋಜನೆಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಮಂಗಳೂರು ನಗರದಲ್ಲಿ ಅಂದಾಜು 2 ಲಕ್ಷ ಆಸ್ತಿಗಳನ್ನು ಈ ಯೋಜನೆಗೆ ಒಳಪಡಿಸಲಾಗುವುದು. ಹೈದರಾಬಾದ್ ಇನ್ಫೋಟೆಕ್ ಎಂಟರ್ಪ್ರೈಸಸ್ ಲಿಮಿಟೆಡ್ ಎಂಬ ಖಾಸಗಿ ಸರ್ವೆ ಕಂಪನಿಯು ಇಲಾಖೆಯ ಸಹಯೋಗೊಂದಿಗೆ ಕಾರ್ಯ ನಿರ್ವಹಿಸಲಿದೆ. ಸಂಸ್ಥೆಯು ಎಲ್ಲಾ ಆಸ್ತಿಗಳನ್ನು ಅಳತೆ ಮಾಡಿ, ನಕ್ಷೆ ತಯಾರಿಸಿ ಆಸ್ತಿಗಳಿಗೆ ಸಂಬಂಧಿಸಿದಂತೆ ಮಾಲಕತ್ವದ ಮಾಹಿತಿಯನ್ನು ಎಲ್ಲಾ ಮೂಲಗಳಿಂದ ಸಂಗ್ರಹಿಸಿ ಮಾಹಿತಿ ಕೋಶ ಸಿದ್ಧಪಡಿಸಲಿದೆ.
ಮೊದಲ ಹಂತದಲ್ಲಿ 64 ಪ್ರಾಥಮಿಕ ನಿಯಂತ್ರಣ ಬಿಂದುಗಳು, 160 ದ್ವಿತೀಯ ಹಂತದ ನಿಯಂತ್ರಣ ಬಿಂದುಗಳನ್ನು ಮತ್ತು ಎಲ್ಲಾ ರಸ್ತೆಗಳು ಸೇರುವ ಸ್ಥಳಗಳನ್ನು ಲಭ್ಯತೆಯನುಸಾರ ತೃತೀಯ ಹಂತದ ನಿಯಂತ್ರಣ ಬಿಂದುಗಳನ್ನು ಸ್ಥಾಪಿಸಿ ಅವುಗಳನ್ನು ಡಿಜಿಪಿಎಸ್ ಮತ್ತು ಇಟಿಎಸ್ ಉಪಕರಣ ಬಳಸಿ ಮಾಹಿತಿ ಪಡೆಯಲಾಗಿದೆ. 32 ಗ್ರಾಮಗಳ ನಕ್ಷೆಗಳನ್ನು ಗಣಕೀಕರಣಗೊಳಿಸಿ ಜಿಯೋ ರೆಫರೆನ್ಸ್ ಪಡೆಯಲಾಗಿದೆ. ಈವರೆಗೆ 1250 ಆಸ್ತಿಗಳನ್ನು ಅಳತೆ ಮಾಡಿ ನಕ್ಷೆ ನಿಗದಿಪಡಿಸಲಾಗಿದೆ. ಅಲ್ಲದೆ, ನಗರಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಕಂದಾಯ ಇಲಾಖೆಯಿಂದ ಪ್ರತಿಯೊಂದು ಆಸ್ತಿಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿ ಮಾಹಿತಿ ಕೋಶ ಸಿದ್ಧಪಡಿಸಲಾಗಿರುತ್ತದೆ. ಪ್ರಸ್ತುತ ಈ ಯೋಜನೆಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದವರು ಹೇಳಿದರು.
ಈ ಯೋಜನೆಗೆ ಸಂಬಂಧಿಸಿ ಸಾರ್ವಜನಿಕರು ಕರ್ನಾಟಕ ಭೂಕಂದಾಯ ಅಧಿನಿಯಮ 1966ರ ನಿಯಮ 84(4)ರ ಪ್ರಕಾರ ನೋಟೀಸು ಜಾರಿಗೊಂಡಾಗ ತಮ್ಮ ಆಸ್ತಿಗಳ ಬಗ್ಗೆ ಇರುವ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ಸಂಬಂಧಪಟ್ಟ ಇಲಾಖೆಗೆ ಹಾಜರುಪಡಿಸಬೇಕಾಗುತ್ತದೆ.
ಹಾಜರುಪಡಿಸಬೇಕಾದ ದಾಖಲೆಗಳು:
* ಕ್ರಯಪತ್ರ/ಖರೀದಿಪತ್ರ
* ಕಂದಾಯ ಕಟ್ಟಿದ ರಶೀದಿ/ ಕಂದಾಯ ಸಲ್ಲಿಸಿರುವ ಬಗ್ಗೆ ರಶೀದಿ
* ಆಸ್ತಿ ಋಣಭಾರ ಪತ್ರ (ಇ.ಸಿ.)
* ಮುನ್ಸಿಪಲ್ ಖಾತೆ ಪತ್ರದ ನಕಲು/ ಪಹಣಿ ಪತ್ರಿಕೆ
* ನಿವೇಶನ ಹಂಚಿಕೆ ಪತ್ರ
* ನಿವೇಶನ ಸ್ವಾಧೀನ ಪತ್ರ
* ಭೂಪರಿವರ್ತನೆ (ಅಲಿನೇಶನ್) ಆದೇಶ ನಕಲು- ಲೇ ಔಟ್ ನಕಾಶೆ ಪ್ರತಿ ನಕಲು
ಈ ದಾಖಲೆಗಳ ಝೆರಾಕ್ಸ್ ಪ್ರತಿ (ಎಲ್ಲ) ಅಥವಾ ಇರುವ ದಾಖಲೆಗಳ ಪ್ರತಿಯನ್ನು ಸಂಬಂಧಪಟ್ಟ ಇಲಾಖೆಯವರು ಅಳತೆಗೆ ಬಂದ ಸಂದರ್ಭ ಹಾಜರುಪಡಿಸಬೇಕು ಎಂದು ಪೊನ್ನುರಾಜ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಅಪರ ಜಿಲ್ಲಾಧಿಕಾರಿ ದಯಾನಂದ್, ಮನಪಾ ಆಯುಕ್ತ ಹರೀಶ್ ಕುಮಾರ್ ಮತ್ತಿತರ ಅದಿಕಾರಿಗಳು ಉಪಸ್ಥಿತರಿದ್ದರು.