ಮಂಗಳೂರು, ಜೂನ್.30:ಬೆಳ್ತಂಗಡಿಯ ಅರಣ್ಯ ಪ್ರದೇಶಗಳ ವ್ಯಾಪ್ತಿಯ 11 ಗ್ರಾಮಗಳಲ್ಲಿ ಮೂಲಭೂತಸೌಕರ್ಯ ಕೊರತೆ ಎದುರಿಸುತ್ತಿರುವವರ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಿ ಅರ್ಹರಿಗೆ ಸವಲತ್ತುಗಳನ್ನು ವಿತರಿಸುವ ಅರ್ಥಪೂರ್ಣ ಜನಸಂಪರ್ಕ ಸಭೆಯನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಬೆಳ್ತಂಗಡಿಯ ಕೊಲ್ಲಿಯಲ್ಲಿ ಆಯೋಜಿಸಿತ್ತು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಎಲ್ಲಾ ಇಲಾಖೆಗಳ ಸಮನ್ವಯ ಹಾಗೂ ಪೂರ್ವಸಿದ್ಧತೆಯೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಿಶೇಷ ಅಭಿನಂದನೆ ಸಲ್ಲಿಸಿದರು.
ಇಲ್ಲಿನ ಜನರಿಗಾಗಿ ಆರೋಗ್ಯ ಇಲಾಖೆ ವತಿಯಿಂದ ಮೊಬೈಲ್ ವಾಹನ, ಮೊಬೈಲ್ ರೇಷನ್ ವಾಹನ ಸೇವೆಯನ್ನು ನಿಯಮಿತವಾಗಿ ನೀಡಲು ಜಿಲ್ಲಾಡಳಿತ ಬದ್ಧ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು. ಕಳೆದ ಎಂಟು ತಿಂಗಳಲ್ಲಿ ಜಿಲ್ಲಾಡಳಿತ ಜನಸಂಪರ್ಕ ಸಭೆ ಆಯೋಜಿಸಿ ಜನರ ಸಮಸ್ಯೆಗಳನ್ನು ಆಲಿಸಿ ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಂಡಿರುವುದಾಗಿಯೂ ಹೇಳಿದ ಎಲ್ಲ ಭರವಸೆಗಳನ್ನು ಈಡೇರಿಸುವ ಬದ್ಧತೆಯನ್ನು ಜಿಲ್ಲಾಧಿಕಾರಿಗಳು ಸಭೆಯಲ್ಲಿ ನೀಡಿದರು.
ಕುತ್ಲೂರು, ನಾರಾವಿಯಲ್ಲಿರುವವರಿಗೆ ಮಿನಿ ಹೈಡ್ರೋ ಕ್ಲಿನಿಕ್ ಯೋಜನೆಗಳ ಮೂಲಕ ವಿದ್ಯುತ್ ನೀಡುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು, ಜಿಲ್ಲಾಪಂಚಾಯತ್ ನಿಂದ 36 ಲಕ್ಷದ ವಿವಿಧ ಕಾಮಗಾರಿಗಳನ್ನು ರೂಪಿಸುವುದಾಗಿ ಹೇಳಿದರು. ಕುತ್ಲೂರು, ನಾರಾವಿಗೆ ಇಬ್ಬರು ಗ್ರಾಮಸಹಾಯಕರನ್ನು ನೇಮಿಸಿದ ಆದೇಶವನ್ನು ದೇವಪ್ಪ ಮಲೆಕುಡಿಯ ಮತ್ತು ಸುಧಾಕರ ಮಲೆಕುಡಿಯ ಅವರಿಗೆ ನೀಡಿದರು.
ಆಶ್ರಮ ಶಾಲೆಯಲ್ಲಿ ಅಡುಗೆಯವರಿಗೆ ನಾಲ್ಕು ಹುದ್ದೆ, 9 ಶಿಕ್ಷಕರ ಹುದ್ದೆಯನ್ನು ಅರ್ಹರಿಗೆ ನೀಡಲಾಯಿತು. ಕೆ ಎಸ್ ಆರ್ ಟಿಸಿಯಲ್ಲಿ ಉದ್ಯೋಗ ಪಡೆಯಲು ತರಬೇತಿ, ಮುಂದಿನ ಒಂದು ತಿಂಗಳೊಳಗಾಗಿ ಎಲ್ಲ ಸೌರ ವಿದ್ಯುತ್ ಸೌಲಭ್ಯ ಹೊಂದಿರುವ ಮನೆಗಳಲ್ಲಿ ಸೋಲಾರ್ ನ್ನು ಸರಿಪಡಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಸ್ಥಳೀಯ ಮೆಸ್ಕಾಂ ಮತ್ತು ಕಂದಾಯ ಇಲಾಖೆಗಳು ಜನರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ತಕ್ಷಣ ತಮ್ಮನ್ನು ಸ್ಥಳೀಯರು ಸಂಪರ್ಕಿಸಬಹುದು ಎಂದ ಜಿಲ್ಲಾಧಿಕಾರಿಗಳು, ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿಗಳನ್ನು ಸರ್ಕಾರ ನೀಡುತ್ತಿದ್ದು, ಆಸಕ್ತರು ಇಲಾಖೆಗೆ ಅರ್ಜಿ ಸಲ್ಲಿಸಬಹುದು ಎಂದರು.
ರಾಷ್ಟ್ರೀಯ ಉದ್ಯಾನವನದೊಳಗೆ ವಾಸಿಸುತ್ತಿರುವವರನ್ನು ಬಲವಂತವಾಗಿ ಒಕ್ಕಲೆಬ್ಬಿಸುವುದಿಲ್ಲ ಎಂಬುದನ್ನು ಜನಸಂಪರ್ಕ ಸಭೆಯಲ್ಲಿ ಸ್ಪಷ್ಟ ಪಡಿಸಿದ ಜಿಲ್ಲಾಧಿಕಾರಿಗಳು, ವೈಯಕ್ತಿಕ ಆಸಕ್ತಿಯಿಂದ, ಸ್ವ ಇಚ್ಛೆಯಿಂದ ಬಂದರೆ ಸೂಕ್ತ ಪರಿಹಾರ ನೀಡಲು ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ ಎಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಗ್ರಾಮದ ಸಮಗ್ರ ಪರಿಚಯ ತಮಗಿದ್ದು, ಉತ್ತಮ ಆರಂಭ ಇಂದಾಗಿದೆ. ಯೋಜನೆಗಳ ಸಮರ್ಪಕ ಅನುಷ್ಠಾನ ಮುಂದಿನ ದಿನಗಳಲ್ಲಿ ಆಗಲಿದೆ ಎಂದರು.
ಸಭೆಗೆ ಆಗಮಿಸಿದ ಸ್ಥಳೀಯರು ಹಕ್ಕುಪತ್ರ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ಬೇಡಿಕೆಯನ್ನು ಮುಂದಿಟ್ಟರು.
ಎಸ್ ಪಿ ಅಭಿಷೇಕ್ ಗೋಯಲ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಪೊಲೀಸ್ ಇಲಾಖೆ ನಕ್ಸಲ್ ಸಮಸ್ಯೆಗಳ ಮೂಲ ಕಂಡು ಹುಡುಕಿ, ಸಾಮಾಜಿಕ ಸಮಸ್ಯೆಗಳು ಇನ್ನಿತರ ಸಮಸ್ಯೆಗಳಿಗೆ ಕಾರಣವಾಗದಂತೆ ತಡೆಯಲು ಇಲಾಖೆ ಜಿಲ್ಲಾಡಳಿತದ ನೆರವನ್ನು ಕೋರಿತ್ತು ಎಂದರು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಭಾಗ್ಯಲಕ್ಮೀ ಬಾಂಡ್, ಆತ್ಮ ಯೋಜನೆಯಲ್ಲಿ ವಿವಿಧ ಸವಲತ್ತುಗಳ ಚೆಕ್ಕು ವಿತರಣೆ, ತೋಟಗಾರಿಕಾ ಇಲಾಖೆಯಿಂದ ಸಸಿ ವಿತರಣೆ,ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಸಹಾಯ ಧನದ ಚೆಕ್ಕು ಸೇರಿದಂರೆ ವಿವಿಧ ಇಲಾಖೆಗಳಿಂದ ಸವಲತ್ತುಗಳನ್ನು ವಿತರಿಸಲಾಯಿತು. ಜಿ.ಪಂ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ವೈಲ್ಡ್ ಲೈಫ್ ಡಿಸಿಎಫ್ ಪ್ರಕಾಶ್ ,ಪುತ್ತೂರು ಎಎಸ್ಪಿ ಎಂ.ಎನ್. ಅನುಚೇತ್, ಪುತ್ತೂರು ಉಪವಿಭಾಗದಾಕಾರಿ ಸುಂದರ ಭಟ್, ಸೇರಿದಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.