ಮಂಗಳೂರು. ಜೂನ್. 23 : ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಪಂಚಾಯತ್ ನಿಂದ 525 ಕೋಟಿ ರೂ. ಕ್ರಿಯಾ ಯೋಜನೆ ರೂಪಿಸಲಾಗಿದೆ. ರಸ್ತೆಗಳ ನಿರ್ಮಾಣಕ್ಕೆ ಮತ್ತು ತ್ಯಾಜ್ಯ ನಿರ್ವಹಣೆಗೆ 23.01 ಕೋಟಿ ರೂ. ಗಳ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನಲ್ಲಿ ಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಭೇಟಿಯ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಆದ್ಯತೆ ಮತ್ತು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದಿದ್ದು, ಘನ ಮತ್ತು ದ್ರವ ತ್ಯಾಜ್ಯ ವಿಲೇಗೆ ಮತ್ತು ಸಂಪರ್ಕ ವ್ಯವಸ್ಥೆಗೆ ಅಗತ್ಯ ಅನುದಾನದ ಬೇಡಿಕೆಯನ್ನು ಸಲ್ಲಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ 42 ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ 216 ಗ್ರಾಮಗಳ ನೀರಿನ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಳು, ಈ ಸಂಬಂಧ ಶೀಘ್ರದಲ್ಲೇ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿಶೇಷ ಸಭೆ ನಡೆಸಲಾಗುವುದು ಎಂದರು.
ಪ್ರಸಕ್ತ ಸಾಲಿನಲ್ಲಿ ಟಾಸ್ಕ್ ಫೋಸ್ರ್ ಯೋಜನೆಯಡಿ 6 ಕೊಳವೆ ಬಾವಿ ಕಾಮಗಾರಿ ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ನಡೆದಿದ್ದು, 4 ಬೋರ್ ವೆಲ್ ಕೊರೆಯಲಾಗಿದೆ. ಟಾಸ್ಕ್ ಫೋರ್ಸ್ ಯೋಜನೆಯಡಿ ರೂ. 4.80 ಲಕ್ಷ ಮಂಜೂರಾಗಿದ್ದು, 7 ಕಾಮಗಾರಿ ಗುರುತಿಸಿದ್ದು, 5 ಕಾಮಗಾರಿ ಪೂರ್ಣಗೊಂಡಿರುತ್ತದೆ.
ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ 76 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ ಎಂದು ಕೆಡಿಪಿಯಲ್ಲಿ ತಾಲೂಕು ಪಂಚಾಯತ್ ಇಒಗಳು ಮಾಹಿತಿ ನೀಡಿದರು. ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪೃಕೃತ್ತಿದತ್ತವಾದ ಝರಿ ನೀರು ಬಳಸುವ ಯೋಜನೆ ರಾಜ್ಯಕ್ಕೆ ಮಾದರಿ ಎಂದು ಸಿಇಒ ಅವರು ನುಡಿದರು. ಜಿಲ್ಲಾ ಪಂಚಾಯತ್ ಅಧೀನ ಕಚೇರಿಗಳು ಹಾಗೂ ಯೋಜನೆಗಳನ್ನು ರೂಪಿಸುವ ಇಂಜಿನಿಯರಿಂಗ್ ವಿಭಾಗ ಮಳೆ ನೀರು ಕೊಯ್ಲಿಗೆ ಪೂರಕವಾಗಿರಬೇಕೆಂದ ಸಿಇಒ ಅವರು, ಜಲಮೂಲಗಳಿಗೆ ಹಾಗೂ ಶಾಲಾ ವನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು. ಶಾಲಾ ವನಗಳಲ್ಲಿ ನಮ್ಮ ಸ್ಥಳೀಯ ಪಾರಂಪರಿಕ ಹಣ್ಣಿನ ಗಿಡಗಳನ್ನು ಬೆಳೆಯಬೇಕು. ವನಮಹೋತ್ಸವದಂತಹ ಕಾರ್ಯಕ್ರಮಗಳು ಸಾಂಕೇತಿಕವಾಗಿ ಆಗದೆ ಪರಿಣಾಮಕಾರಿಯಾಗಿ ಆಗಬೇಕು. ಬೇಸಿಗೆಯಲ್ಲಿ ಕುಡಿಯುವ ನೀರು ಸಮಸ್ಯೆ ಆಲಿಸಲು ಸ್ಥಾಪಿಸಲಾಗಿದ್ದ ಕಂಟ್ರೋಲ್ ರೂಂ ಗಳು ಮಳೆಗಾಲದಲ್ಲಿ ವಿಪತ್ತು ನಿರ್ವಹಣಾ ಘಟಕಗಳಾಗಿ ಮುಂದುವರಿಯಲು, ವಿಕೋಪಗಳ ಬಗ್ಗೆ ಜನರಿಗೆ ಸ್ಪಂದಿಸಲು ಈ ಘಟಕಗಳು ಕಾರ್ಯಪ್ರವೃತ್ತವಾಗಲಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಳು ಹೇಳಿದರು.
ಜಿಲ್ಲೆಯಲ್ಲಿ ಕೊಳವೆಬಾವಿ ಕೊರೆಯುವ ಬಗ್ಗೆ ಪರಿಶೀಲನೆ ನಡೆಸಲು ಸಮಿತಿ ರಚಿಸಲಾಗಿದ್ದು ಜಿಲ್ಲಾ ಭೂಗರ್ಭ ಶಾಸ್ತ್ರಜ್ಞರು ಅದಕ್ಕೆ ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಗ್ರಾಮಗಳಲ್ಲಿ ಮನ ಬಂದಂತೆ ಬೋರ್ ವೆಲ್ ಕೊರೆದು ನೀರಿಗಾಗಿ ಹಾಹಾಕಾರ ಸೃಷ್ಟಿಸುವ ಬದಲು ಸಮೀಕ್ಷೆ ಹಾಗೂ ವೈಜ್ಞಾನಿಕ ವರದಿ ಬಂದ ನಂತರ ಬೋರ್ ವೆಲ್ ಕೊರೆಯಲು ಅನುಮತಿ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದರು.
ಬಸವ ವಸತಿ, ಇಂದಿರಾ ಆವಾಸ್ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗುವಂತೆ ಪ್ರಸಕ್ತ ಸಾಲಿನಲ್ಲಿ ಯೋಜನೆ ರೂಪಿಸಲಾಗಿದೆ. ಸಮಾಜ ಕಲ್ಯಾಣ ಮತ್ತು ಐಟಿಡಿಪಿ ಇಲಾಖೆ ಯನ್ನೊಳಗೊಂಡಂತೆ ಎಲ್ಲ ಇಲಾಖೆಗಳು ನಿಗದಿತವಾಗಿ ತಮ್ಮ ಇಲಾಖೆಯ ಅಭಿವೃದ್ಧಿ ಯ ಬಗ್ಗೆ ಮಾಹಿತಿ ನೀಡಬೇಕೆಂದರು.
ಘನ ತ್ಯಾಜ್ಯ ವಿಲೇವಾರಿ ಬಗ್ಗೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಭೂಮಿ ಗುರುತಿಸಿದ್ದು ಯೋಜನೆ ಪ್ರಗತಿಯಲ್ಲಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆಯಡಿ ನೋಂದಣಿ ಕಾರ್ಯವು ಯಶಸ್ವಿಯಾಗಿ ಮುಗಿದಿದ್ದು ಮಂಗಳೂರಿನಲ್ಲಿ 9,717, ಬಂಟ್ವಾಳದಲ್ಲಿ 5,993, ಪುತ್ತೂರಿನಲ್ಲಿ 4,927, ಸುಳ್ಯದಲ್ಲಿ 3,427, ಬೆಳ್ತಂಗಡಿಯಲ್ಲಿ 8,941 ಸ್ಮಾಟ್ರ್ ಕಾಡ್ರ್ ಪಡೆದ ಬಿಪಿಎಲ್ ಕುಟುಂಬಗಳು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಎಲ್ಲ ಅಂಗನವಾಡಿಗಳಿಗೆ ಮೆಸ್ಕಾಂ ಸಹಕಾರದಿಂದ ತಕ್ಷಣದಿಂದಲೇ ವಿದ್ಯುದೀಕರಣ ಕಾಮಗಾರಿ ಆರಂಭಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಸಿಇಒ ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಧನಲಕ್ಷ್ಮೀ ಜನಾರ್ಧನ್, ಸ್ಥಾಯಿ ಸಮಿತಿ ಸದಸ್ಯರಾದ ಜನಾರ್ಧನ ಗೌಡ, ಈಶ್ವರ ಕಟೀಲ್, ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ಮುಖ್ಯ ಲೆಕ್ಕಾಧಿಕಾರಿ ಶೇಕ್ ಲತೀಫ್, ಯೋಜನಾ ನಿರ್ದೇಶಕರಾದ ಸೀತಮ್ಮ ಉಪಸ್ಥಿತರಿದ್ದರು.