Thursday, February 9, 2012

ಹಿಂಗಾರಿನಲ್ಲಿ ಜಿಲ್ಲೆಯಲ್ಲಿ 21 ಸಾವಿರ ಹೆಕ್ಟೇರಿನಲ್ಲಿ ಭತ್ತ ಬಿತ್ತನೆ

ಮಂಗಳೂರು,ಫೆಬ್ರವರಿ.08:ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ಬೆಳೆ ಭತ್ತವಾಗಿದ್ದು,ಪ್ರಸ್ತುತ ಹಿಂಗಾರಿನಲ್ಲಿ ಜಿಲ್ಲೆಯಲ್ಲಿ 24000 ಹೆಕ್ಟೇರಿನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, 21176 ಹೆಕ್ಟೇರಿನಲ್ಲಿ ಭತ್ತ ನಾಟಿ ಮಾಡಲಾಗಿದೆಯೆಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಡಾ.ಎ.ಪದ್ಮಯ್ಯ ನಾಕ್ ತಿಳಿಸಿದ್ದಾರೆ.2010-11 ರಲ್ಲಿ 20,982 ಹೆಕ್ಟೇರಿನಲ್ಲಿ ಭತ್ತ ಬೆಳೆಯಲಾಗಿತ್ತು. ಈ ಬಾರಿ ಭತ್ತ ಬೆಳೆಯುವ ಪ್ರದೇಶ ಹೆಚ್ಚಾಗಿದೆ ಎಂದ ಅವರು ಮುಂಗಾರು ಹಂಗಾಮಿನಲ್ಲಿ 34000 ಹೆಕ್ಟೇರಿನಲ್ಲಿ ಭತ್ತ ಬೆಳೆಯಲು ಗುರಿ ಹಮ್ಮಿಕೊಂಡಿದ್ದು, 32423 ಹೆಕ್ಟೇರಿನಲ್ಲಿ ಭತ್ತ ಕೃಷಿ ಮಾಡಿ ಒಟ್ಟು 90480 ಟನ್ ಭತ್ತ ಬೆಳೆಯಾಗಿದೆ. ಸರಾಸರಿ ಇಳುವರಿ ಪ್ರತೀ ಹೆಕ್ಟೇರಿಗೆ 2.719 ಟನ್ ಅಕ್ಕಿ ರೂಪದಲ್ಲಿ ಪಡೆಯಲಾಗಿದೆಯೆಂದು ಅವರು ತಿಳಿಸಿದ್ದಾರೆ. 2011-12 ನೇ ಸಾಲಿನಲ್ಲಿ ದ್ವಿದಳ ಧಾನ್ಯಗಳಾದ ಉದ್ದು 967 ಹೆಕ್ಟೇರ್,ಅಲಸಂಡೆ 150 ಹೆಕ್ಟೇರ್,ಹುರುಳಿ 172 ಹೆಕ್ಟೇರಿನಲ್ಲಿ ಬಿತ್ತನೆ ಮಾಡಲಾಗಿತ್ತು. ಭತ್ತ ಬೇಸಿಗೆ ಬೆಳೆಯಾಗಿ 2500 ಹೆಕ್ಟೇರ್ ನಲ್ಲಿ ಬೆಳೆಯುವ ಗುರಿ ಹೊಂದಿದ್ದು,ಇಲ್ಲಿಯವರೆಗೆ 894 ಹೆಕ್ಟೇರಿನಲ್ಲಿ ನಾಟಿ ಮಾಡಿದ್ದು ಪ್ರಗತಿಯಲ್ಲಿದೆ.ಜಿಲ್ಲೆಯ ರೈತರು ಅಧಿಕ ಇಳುವರಿ ನೀಡುವ ಉತ್ತಮ ಬಿತ್ತನೆ ಬೀಜ ತಳಿಗಳನ್ನು ಆಯ್ಕೆ ಮಾಡಿರುವ ಪರಿಣಾಮ ಉತ್ತಮ ಇಳುವರಿ ಪಡೆಯಲಾಗುತ್ತಿದೆಯೆಂದು ತಿಳಿಸಿದ ಅವರು 3 ನೇ ಬೆಳೆಯನ್ನು ಬೆಳೆಯದ ರೈತರು ತಮ್ಮ ಜಮೀನಿನಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆದಲ್ಲಿ ಅದರ ಸೊಪ್ಪು ದಂಟು ಪಶುಗಳಿಗೆ ಆಹಾರವಾಗಲಿದೆ ಹಾಗೇ ಅದರ ಬೇರಿನ ಗಂಟಿನಲ್ಲಿ ಸಾರಜನಕ ಹೀರಿಕೊಂಡು ಶೇಖರಿಸಿಟ್ಟುಕೊಳ್ಳಲಿದೆ.ಇದರಿಂದ ರೈತರ ಭೂಮಿಗೆ ಉತ್ತಮ ನೈಸರ್ಗಿಕ ಸಾರಜನಕ ದೊರೆಯಲಿದೆಯೆಂದು ತಿಳಿಸಿದ್ದಾರೆ.