ಮಂಗಳೂರು,ಫೆಬ್ರವರಿ.17 :ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ಆರೋಗ್ಯ ಇಲಾಖೆ ಅವಿರತ ಶ್ರಮಿಸುತ್ತಿದ್ದು ಗುರಿ ಸಾಧನೆಯತ್ತ ನಮ್ಮ ದೇಶ ಸಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ. ಆರ್. ಶ್ರೀರಂಗಪ್ಪ ತಿಳಿಸಿದರು.ಫೆಬ್ರವರಿ 19 ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತ ಪತ್ರಿಕಾ ಗೋಷ್ಟಿ ಯನ್ನು ದ್ದೇಶಿಸಿ ಮಾತ ನಾಡುತ್ತಿದ್ದ ಅವರು, ಜಿಲ್ಲೆಯಲ್ಲಿ ಕೊನೆಯ ಪ್ರಕರಣ 1999ರಲ್ಲಿ ಅತ್ತಾವರ ಕೆ ಎಂ ಸಿ ಬಳಿ ವರದಿ ಯಾಯಿತು. ಆ ಬಳಿಕ ಜಿಲ್ಲೆಯಲ್ಲಿ ಪೋಲಿಯೋ ಪ್ರಕರಣ ದಾಖಲಾಗಿಲ್ಲ ಎಂದರು.ಹೆತ್ತವರು ಮಕ್ಕಳಿಗೆ ನಿಯಮಿತವಾಗಿ ಲಸಿಕೆಗಳನ್ನು ಹಾಕಿಸುವುದು ಹಾಗೂ ಪಲ್ಸ್ ಪೋಲಿಯೋ ದಿನಗಳಂದು ಪೋಲಿಯೋ ಹನಿ ಹಾಕಿಸುವುದರಿಂದ ಪೋಲಿಯೋ ಮುಕ್ತವಾಗಿಸಲು ನೆರವಾಗಬೇಕು. ನಗರದಲ್ಲಿ ಫ್ಲ್ಯಾಟ್ ಗಳಲ್ಲಿ ವಾಸಿಸುವರು ಪೋಲಿಯೋ ಹನಿ ಹಾಕಿಸುವ ಕಾರ್ಯಕ್ರಮ ಯಶಸ್ವಿಯಾಗಿಸಲು ನೆರವಾಗಬೇಕೆಂದು ಕೋರಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೆತ್ತವರ ಸಹಕಾರದಿಂದ ಮಾತ್ರ ಕಾರ್ಯಕ್ರಮದ ಯಶಸ್ವಿ ಸಾಧ್ಯ ಎಂದರು.2011-12ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲನೇ ಸುತ್ತು ಫೆಬ್ರವರಿ 19ರಂದು ಭಾನುವಾರ ನಡೆಯಲಿದ್ದು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಪೋಲಿಯೋ ಹನಿ ಹಾಕಿಸಲು ಕೋರಿದ್ದಾರೆ.ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಯೋಜನೆ ರೂಪಿಸಲಾಗಿದ್ದು, ವಲಸೆಯಿಂದಾಗಿ ರೋಗ ಹರಡದಂತೆ ಗುರಿಯಿರಿಸಿಕೊಳ್ಳಲಾಗಿದೆ.
ವೆನ್ ಲಾಕ್ ನಲ್ಲಿ 19ರಂದು ಬೆಳಗ್ಗೆ 8.30ಕ್ಕೆ ಉಪಸಭಾಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲಾಧಿಕಾರಿಗಳು ಹಾಜರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡುವರೆಂದು ಆರ್ ಸಿ ಎಚ್ ಅಧಿಕಾರಿ ಡಾ ರುಕ್ಮಿಣಿ ಅವರು ಹೇಳಿದರು.
ಕಾರ್ಯಕ್ರಮದ ಯಶಸ್ಸಿಗೆ 7 ತಂಡಗಳನ್ನು ತುರ್ತು ನಿಗಾ ತಂಡ ಎಂದು ಗುರುತಿಸಲಾಗಿದೆ. ಅನುಮಾನಗಳು ಆತಂಕಗಳಿದ್ದಲ್ಲಿ,ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಲಿ ಕೋರಲಾಗಿದೆ. 944843050, 9449843194, 9448931945, 9845700807, 9480983607, 9449773045, 0824-2423672, 9483503672.