Saturday, May 7, 2011

ಜನಸೇವೆಗೆ ಆದ್ಯತೆ: ಆರ್ ಅಶೋಕ್

ಮಂಗಳೂರು,ಮೇ.07:ಸಾರಿಗೆ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆಯ ಮುಖಾಂತರ ಜನರಿಗೆ ಸೇವೆನೀಡುವುದಷ್ಟೆ ತಮ್ಮ ಸರ್ಕಾರದ ಧ್ಯೇಯ ಎಂದು ಸಾರಿಗೆ ಮತ್ತು ಗೃಹ ಸಚಿವ ಆರ್ ಅಶೋಕ್ ಅವರು ನುಡಿದರು. ಅವರಿಂದು ಪುತ್ತೂರಿನಲ್ಲಿ 7ಕೋಟಿ 32ಲಕ್ಷ ರೂ.ಗಳ ಎರಡು ಅಂತಸ್ತುಗಳ ನೂತನ ಬಸ್ ನಿಲ್ದಾಣದ ಶಿಲಾನ್ಯಾಸ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗುಣಮಟ್ಟ ಮತ್ತು ಸೇವೆಗೆ ಪ್ರಾಧ್ಯಾನ್ಯತೆ ನೀಡಿದ್ದು, 25,000 ಹೊಸ ಬಸ್ ಗಳು ಜನರಿಗೆ ಸೇವೆಯನ್ನು ನೀಡುತ್ತಿವೆ ಎಂದರು. ಬಿಸಿರೋಡ್, ಉಡುಪಿ, ಉಪ್ಪಿನಂಗಡಿ, ಗುಂಡ್ಯ, ಧರ್ಮಸ್ಥಳ, ಸುಳ್ಯಗಳಲ್ಲಿ ಬಸ್ ಸ್ಟ್ಯಾಂಡ್ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಮಂಗಳೂರಿನಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ 65 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ. ಮೈಸೂರಿನಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪಿಪಿಪಿ ಮಾಡೆಲ್ ನಲ್ಲಿ 7 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂದರು. ಇಂದು ಕೆ ಎಸ್ ಆರ್ ಟಿಸಿ ಯ ಯೋಜನೆಗಳು ಮುಂದಿನ 30 ವರ್ಷಗಳ ಅಗತ್ಯವನ್ನು ಮನದಲ್ಲಿರಿಸಿ ರೂಪಿಸಲಾಗುತ್ತಿದ್ದು, ಖಾಸಗಿಯವರೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಸರ್ಕಾರಿ ವ್ಯವಸ್ಥೆ ನೀಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಮಲ್ಲಿಕಾಪ್ರಸಾದ್ ಅವರು, ತಮ್ಮ ಅವಧಿಯಲ್ಲಿ ನಡೆಯಬೇಕಾದ ಯೋಜನೆಗಳ ಬಗ್ಗೆ ಸಚಿವರ ಗಮನಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್, ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್, ದ.ಕ.ಜಿ.ಪಂ ಅಧ್ಯಕ್ಷರಾದ ಕೆ. ಟಿ ಶೈಲಜಾ ಭಟ್, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ಪುತ್ತೂರು ಪುರಸಭೆ ಅಧ್ಯಕ್ಷರಾದ ಕಮಲಾ ಆನಂದ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭು ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.