
ಸಮರ್ಪಕ ಕುಡಿಯುವ ನೀರಿನ ಪೂರೈಕೆ, ವಿದ್ಯುಚ್ಛಕ್ತಿ ಉತ್ಪಾದನೆ, ಪ್ರವಾಹ ನಿಯಂತ್ರಣ, ಪ್ರವಾಸೋದ್ಯಮ ಅಭಿವೃದ್ಧಿ, ಆರ್ಥಿಕ ಪುನಶ್ಚೇತನ ಹಾಗೂ ಒಳನಾಡು ಮೀನುಗಾರಿಕೆಗೆ ಯೋಜನೆ ಪೂರಕವಾಗಲಿದೆ ಎಂದು ಎ.ಜಿ. ಕೊಡ್ಗಿಯವರು ನುಡಿದರು.ಯೋಜನೆಗೆ ಸುಮಾರು ರೂ.5 ಸಾವಿರ ಕೋಟಿ ವೆಚ್ಚವಾಗಲಿದ್ದು, 10 ವರ್ಷಗಳಲ್ಲಿ ಯೋಜನಾ ವೆಚ್ಚವನ್ನು ಭರಿಸಿಕೊಳ್ಳಬಹುದಾಗಿದೆ ಎಂದು ನುಡಿದ ಕೊಡ್ಗಿ ಅವರು, ಇದರಿಂದ ಅಂತರ್ಜಲ ಮಟ್ಟ ಕೂಡ ಹೆಚ್ಚಲಿರುವುದಾಗಿ ತಿಳಿಸಿದರು.
ದಿಕ್ಸೂಚಿ ಭಾಷಣಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಸದಸ್ಯ ಪ್ರೊ. ಜಿ.ವಿ. ಜೋಶಿ, ನಂಜುಂಡಪ್ಪ ವರದಿಯನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳು ಸಮರ್ಪಕವಾಗಿ ಉಪಯೋಗಿಸಿಕೊಂಡಿಲ್ಲ. ಸೌಭಾಗ್ಯ ಸಂಜೀವಿನಿ ಅಂತಹ ಒಂದು ಅವಕಾಶವನ್ನು ತೆರೆದಿಟ್ಟಿದೆ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಕುಡಿಯುವ ನೀರು, ಕೃಷಿ ನೀರಾವರಿ ಮತ್ತು ವಿದ್ಯುತ್ ಸಮಸ್ಯೆಗೆ ಈ ಯೋಜನೆಯಲ್ಲಿ ಉತ್ತರವಿದೆ ಎಂದರು.ಯೋಜನೆಯ ಅನುಷ್ಠಾನದಿಂದ ಕೃಷಿ ವಲಯದಲ್ಲಿ ಹೆಚ್ಚಿನ ಉತ್ಪಾದನೆ ಸಾಧ್ಯ. ಮಾತ್ರವಲ್ಲದೆ ಈ ಭಾಗದಲ್ಲಿ ದೊಡ್ಡ ನೀರಾವರಿ ಯೋಜನೆ ಸಾಧ್ಯ ಎಂಬುದನ್ನು ಸೌಭಾಗ್ಯ ಸಂಜೀವಿನಿ ತೋರಿಸಿಕೊಡಲಿದೆ ಎಂದರು.
ವಿಧಾನ ಸಭಾ ಉಪಾಧ್ಯಕ್ಷ ಎನ್. ಯೋಗೀಶ್ ಭಟ್ ಮಾತನಾಡಿ, ರಾಜ್ಯದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಅವುಗಳ ಸದುಪಯೋಗವಾಗಬೇಕು. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸೌಭಾಗ್ಯ ಸಂಜೀವಿನಿ ಅನುಷ್ಠಾನದಿಂದ ಅದನ್ನು ನಿವಾರಿಸಬಹುದು ಎಂದರು. ಎನ್ಐಟಿಕೆ ಸುರತ್ಕಲ್ನ ಪ್ರಾಧ್ಯಾಪಕ ಪ್ರೊ. ಎಸ್.ಜಿ. ಮಯ್ಯ, ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂಗರ್ಭಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಕೃಷ್ಣಯ್ಯ, ಪ್ರೊ. ಗಂಗಾಧರ ಭಟ್, ಮಣಿಪಾಲ ಎಂ.ಐ.ಟಿ.ಯ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ಮದ್ದೋಡಿ, ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ. ನಾವಡ ವಿಷಯತಜ್ಞರಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಕಾರದ ಸದಸ್ಯ ಗುಜ್ಜಾಡಿ ಪ್ರಭಾಕರ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಗಣೇಶ್ ಕಾರ್ಣಿಕ್ ಮತ್ತು ಪ್ರಾಧಿಕಾರದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಪ್ರಭಾಕರ ರಾವ್ ಸ್ವಾಗತಿಸಿ, ವ್ಯವಸ್ಥಾಪಕ ಪ್ರವೀಣ್ ಬಿ. ನಾಯಕ್ ವಂದಿಸಿದರು.