ಮಂಗಳೂರು,ಮೇ.02:ಮಂಗಳೂರು ತಾಲ್ಲೂಕಿನ ಇರಾ ಬಳಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ವಶಪಡಿಸಿಕೊಂಡಿರುವ 176 ಎಕರೆ ಜಮೀನಿನಲ್ಲಿ ಕೈಗಾರಿಕೆಗಳಿಗೆ ಬೇಕಾದ ನೀರು ರಸ್ತೆ ಹಾಗೂ ವಿದ್ಯುತ್ನಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಂತರ ಸ್ಥಳೀಯ ಉದ್ಯಮಿಗಳಿಗೆ /ಕೈಗಾರಿಕೋದ್ಯಮಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿ ಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇರಾ ಗ್ರಾಮದ ಬಳಿ 585 ಎಕರೆ ಜಮೀನು ಬೇಕಾಗಿದ್ದು,ಈಗಾಗಲೇ 176 ಎಕರೆ ವಶಪಡಿಸಿಕೊಳ್ಳಲಾಗಿದ್ದು, ಪ್ರಥಮ ಹಂತದಲ್ಲಿ ವಶಪಡಿಸಿಕೊಂಡಿರುವ ಭೂಮಿಯನ್ನು ಅಭಿವೃದ್ಧಿ ಪಡಿಸಿ ಹಂಚಿಕೆಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗಂಜಿಮಠದ ಬಳಿ 200 ಎಕರೆಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅಭಿವೃದ್ಧಿ ಪಡಿಸಿದ್ದು,ವಿದ್ಯುತ್ ಉಪ ಕೇಂದ್ರಕ್ಕೆ ಬೆಸ್ಕಾಂರವರು ಹಣ ಪಾವತಿಸಿದ ಕೂಡಲೇ ಭೂಮಿಯನ್ನು ಹಸ್ತಾಂತರಿಸಲು ಜಿಲ್ಲಾಧಿಕಾರಿಗಳು ಕೆ.ಐ.ಡಿ.ಬಿ ಅಧಿಕಾರಿಗಳಿಗೆ ತಿಳಿಸಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಪೂರ್ಣಗೊಂಡಿರುವ ರಸ್ತೆ,ಚರಂಡಿ ಕಾಮಗಾರಿಗಳನ್ನು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಸೂಚಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಾದ ಎಸ್.ಜಿ.ಹೆಗಡೆ, ಕೆಐಎಡಿಬಿ, ಕೆಎಸ್ಎಫ್ ಸಿ,ಬೆಸ್ಕಾಂ,ಚೇಂಬರ್ ಆಫ್ ಕಾಮರ್ಸ್ ಮುಂತಾದ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.