ಮಂಗಳೂರು,ಜು.31:ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸಲು ಹಾಗೂ ನೀರಿನ ದುರುಪಯೋಗವಾಗದಂತೆ ತಡೆಯಲು ಮೀಟರ್ ಅಳವಡಿಸುವಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಹೇಳಿದರು.
ಅವರಿಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿ ಗಿನ ಸಂವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾ ಪಂಚಾಯತ್ ಮೌನವಾಗಿ ನಡೆಸಿರುವ ಸಾಧನೆಗಳನ್ನು ವಿವರಿಸಿದರು. ಗ್ರಾಮ ಪಂಚಾಯತ್ ಗಳು ಜಿಲ್ಲಾ ಕೇಂದ್ರಗಳು ಕಾರ್ಯ ನಿರ್ವಹಿಸುವ ಮಾದರಿಯಲ್ಲೇ ರೂಪುಗೊಳ್ಳಲು ಹಾಕಿಕೊಂಡಿರುವ ಯೋಜನೆಗಳನ್ನು ಸಭೆಗೆ ತಿಳಿಸಿದ ಅವರು, ಗ್ರಾಮ ಪಂಚಾಯತ್ ಗಳ ಸಬಲೀಕರಣಕ್ಕೆ ಪಿಡಿಒಗಳ ನೇಮಕ ಬಹಳಷ್ಟು ಶಕ್ತಿ ತುಂಬಲಿದೆ ಎಂದರು.ಜಿಲ್ಲೆಯಲ್ಲಿ ಬಂಟ್ವಾಳ ಮತ್ತು ಮಂಗಳೂರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು ನೀರಿನ ಮೂಲಗಳ ಜಲ ಮರು ಪೂರಣಕ್ಕೆ ಹಾಗೂ ನಿರಂತರ ನೀರನ್ನು ಒದಗಿಸಲು ಎರಡೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ರೂಪಿಸಿ ಕಾರ್ಯಾರಂಭ ಮಾಡಲಾಗಿದೆ. ಈ ಸಂಬಂಧ ಮೊದಲ ಹಂತದ ಪ್ರಯೋಗವಾಗಿ ಕಿನ್ನಿಗೋಳಿ, ಹಳೆಯಂಗಡಿ, ತೋಕೂರು, ಗೋಳ್ತ ಮಜಲುಗಳನ್ನು ಆರಿಸಲಾಗಿದೆ ಎಂದರು. 203 ಗ್ರಾಮ ಪಂಚಾಯತ್ ಗಳ 127 ಗ್ರಾಮ ಪಂಚಾಯತ್ ಗಳಲ್ಲಿ 86,000 ನೀರು ಸಂಪರ್ಕ ನೀಡಿದ್ದು, 39,000 ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಯೋಜನೆ ಯಶಸ್ಸಿಗೆ ಜನರ ಸಹಕಾರವನ್ನು ಸ್ಮರಿಸಿದ ಅವರು, ನವದೆಹಲಿಯಲ್ಲಿ 5 ದೇಶಗಳು ಪಂಚತಂತ್ರ:ಪಾಲ್ಗೊಂಡ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು ಎಂದರು.ವ್ಯವಸ್ಥೆಯನ್ನು ಪಾರದರ್ಶಕ ಗೊಳಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮ ಪಂಚಾಯತ್ ಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಪೂರಕವಾಗಿ ಎಲ್ಲ 203 ಗ್ರಾಮ ಪಂಚಾಯಿತಿ ಗಳನ್ನು ಆನ್ ಲೈನ್ ಗೊಳಿಸಲಾಗಿದ್ದು, ಡಬಲ್ ಎಂಟ್ರಿ ಸಿಸ್ಟಮ್ ನ್ನು ಜಾರಿಗೊಳಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಚಾರ್ಟೆಡ್ ಅಕೌಂಟೆಂಟ್ ಗಳ ನೆರವನ್ನು ಪಡೆಯಲಾಗಿದೆ. ಈ ವೆಬ್ ಬೇಸ್ಡ್ ಸಾಫ್ಟ್ ವೇರ್ ನಿಂದ ಮಾನಿಟರಿಂಗ್ ಗೆ ಸಹಕಾರ ದೊರೆಯಲಿದೆ ಎಂದರು.
ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ನೀಡಿರುವ ಆದ್ಯತೆ, ಸ್ವಚ್ಛತಾ ಆಂದೋಲನ ನಿರಂತರವಾಗಿ ನಡೆಯಲು ಕೈಗೊಂಡಿರುವ ಕ್ರಮ, ಸ್ವಚ್ಛತಾ ಪುರಸ್ಕಾರಗಳು ಇದೇ ಉದ್ದೇಶಕ್ಕೆ ಸದ್ಬಳಕೆ ಯಾಗುವಂತೆ ವಹಿಸಿದ ಮುತುವರ್ಜಿಯ ಬಗ್ಗೆ ಸಿಇಒ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸುವರ್ಣ ಗ್ರಾಮೋದಯ: ಸುವರ್ಣ ಗ್ರಾಮೋದಯ ಯೋಜನೆ ಯಡಿ 65 ಗ್ರಾಮಗಳಲ್ಲಿ ನಿರುದ್ಯೋಗ ಹೊಂದಿರುವ ಯುವಕ/ಯುವತಿಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲು 243.63ಲಕ್ಷ ಅನುದಾನ ಲಭ್ಯವಿದೆ. ಈ ಬಗ್ಗೆ ಫಲಾನುಭವಿ ಆಯ್ಕೆ ಪ್ರಕ್ರಿಯೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈಗಾಗಲೇ ಆರಂಭಗೊಂಡಿದೆ. 7 ರಿಂದ 12 ರವರೆಗೆ ಕಲಿತು ನಿರುದ್ಯೋಗಿ ಗಳಾಗಿರುವ ಗ್ರಾಮೀಣ ಮಟ್ಟದ ಯುವಶಕ್ತಿಗೆ ಅವರು ಇಚ್ಛಿಸುವ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರೂ.10.00 ಲಕ್ಷ ಹಾಗೂ ತಾಲೂಕು ಪಂಚಾಯತ್ ಮಟ್ಟದಲ್ಲಿ ರೂ. 25.00 ಲಕ್ಷ ವೆಚ್ಚದಡಿ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ನಿರ್ಮಿಸಲು ಅನುದಾನವಿದೆ. ಈ ಕೇಂದ್ರವು ಎಂಜಿಎನ್ಆರ್ಇಜಿಎ ಕಾರ್ಯಕ್ರಮ ಅನುಷ್ಠಾನಕ್ಕೆ ಸ್ಥಳಾವಕಾಶ, ಗ್ರಾಮಸಭೆಗಳನ್ನು ನಡೆಸಲು ಸಭಾಂಗಣ, ಕಟ್ಟಡಗಳಿಲ್ಲದ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗೆ ಸ್ಥಳಾವಕಾಶ ನೀಡುವುದಲ್ಲದೆ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ ಆರ್ ಇ ಜಿ ಎ ಮತ್ತು ಇತರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಮತ್ತು ಸೌಲಭ್ಯ ಪಡೆಯಲು ನಾಗರೀಕ ಮಾಹಿತಿ ಮತ್ತು ಸೇವಾ ಕೇಂದ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಯೋಜನೆ ರೂಪಿಸಿದೆ.
ವಸತಿ ಯೋಜನೆಗಳ ಸಾಲದ ಮೇಲಿನ ಬಡ್ಡಿ ಮನ್ನಾ: ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸುತ್ತಿರುವ ವಿವಿಧ ವಸತಿ ಯೋಜನೆಗಳ ನಿರ್ಮಾಣಕ್ಕೆ ಸಾಲ ಹಾಗೂ ಸಹಾಯಧನ ಕಾರ್ಯಕ್ರಮದಡಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಶೇ.11ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಫಲಾನುಭವಿ ಮನೆ ನಿರ್ಮಾಣಕ್ಕೆ ರೂ.10,000 ಸಾಲವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಪಡೆದಿದ್ದಲ್ಲಿ ತಿಂಗಳ ರೂ.115 ಮಾಸಿಕ ಕಂತಿನಂತೆ 180 ಕಂತುಗಳಲ್ಲಿ ಸಾಲವನ್ನು ಮರು ಪಾವತಿಸ ಬೇಕಾಗುತ್ತದೆ ಸಾಲ ಪಡೆದ ಫಲಾನುಭವಿಗಳಿಗೆ ಬಡ್ಡಿ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಶ್ರಯ/ನವಗ್ರಾಮ ಯೋಜನೆಗಳ ಸಾಲಕ್ಕೆ ಸಂಬಂಧಿಸಿದಂತೆ 31.3.10 ರೊಳಗೆ ಸಾಲ ಪಾವತಿಸಿದ್ದಲ್ಲಿ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದರು. ದ.ಕ ಜಿಲ್ಲೆಯಲ್ಲಿ ಮೇಲ್ಕಂಡ ವಸತಿ ಯೋಜನೆಯಡಿ 26591 ಫಲಾನುಭವಿಗಳು ಸಾಲವನ್ನು ಪಡೆದಿದ್ದು ಅವರೆಲ್ಲರೂ ಸಾಲ ಪಾವತಿಸಲು ಮುಂದಾದರೆ ಒಟ್ಟು 1.84 ಕೋಟಿ ಬಡ್ಡಿ ಮನ್ನಾ ಮಾಡಿದಂತಾಗುತ್ತದೆ ಎಂದು ಶಿವಶಂಕರ್ ವಿವರಿಸಿದರು.ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಶಿವರಾಮೇಗೌಡ, ಸಿಪಿಒ ತಾಕತ್ ರಾವ್, ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ,ಮುಖ್ಯ ಲೆಕ್ಕಾಧಿಕಾರಿ ಬಾಣದ ತಿಮ್ಮಪ್ಪ ಅವರು ಉಪಸ್ಥಿತರಿದ್ದರು.