ಮಂಗಳೂರು, ಜುಲೈ 9:ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಗಳು ಪ್ರೊ. ವೈದ್ಯನಾಥನ್ ವರದಿ ಶಿಫಾರಸ್ಸಿನ ಆಧಾರದಲ್ಲಿ ಸಹಕಾರಿ ಕಾನೂನಿಗೆ ತಂದ ತಿದ್ದುಪಡಿಯಂತೆ ಕೆಲವೊಂದು ಅನುಕೂಲತೆಗಳಿದ್ದರೂ ಪ್ರಮುಖ ತೊಡಕುಗಳ ಬಗ್ಗೆ ಜುಲೈ 8ರಂದು ಬೆಂಗಳೂರಿನ ಶಾಸಕರ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಸಕರ, ಸಹಕಾರಿಗಳ ಜೊತೆ ಚಿಂತನೆ ನಡೆಸಲಾಯಿತು.
ಎಲ್ಲ ಬ್ಯಾಂಕಿಂಗ್ ನಾರ್ಮ್, ಎನ್ ಪಿ ಎ, ಸಿ ಆರ್ ಆರ್, ಸಿ ಆರ್ ಎ ಆರ್ ಇತ್ಯಾದಿ ಅಳವಡಿಸಿ ಕೊಳ್ಳುತ್ತಿರುವ ಪ್ರಾಥಮಿಕ ಬ್ಯಾಂಕ್ ಗಳು ತಮ್ಮ ಬ್ಯಾಂಕಿಂಗ್ ವ್ಯವಹಾರ ಸುಗಮವಾಗಿ ಮುಂದುವರೆಸಲು ಆರ್ ಬಿ ಐ ಯವರಿಂದ ಅಗತ್ಯದ ಅನುಮತಿ ದೊರಕಿಸಿ ಕೊಡಲು ಸರಕಾರ ಪ್ರಯತ್ನಿಸ ಬೇಕೆಂದು ಸಭೆಯಲ್ಲಿ ಕೋರಲಾಯಿತು. ಈಗಿನಂತೆ ಬ್ಯಾಂಕ್ ಶಬ್ದ ಹಾಗೂ ಬ್ಯಾಂಕಿಂಗ್ ವ್ಯವಹಾರ ಮುಂದುವರೆಸಲು ಸರಕಾರ ಅನುಮತಿ ನೀಡಬೇಕೆಂದು ಕೇಳಿಕೊಳ್ಳಲು ಸಭೆ ತೀರ್ಮಾನಿಸಿತು. ಸೇವಾ ಭಾವದಿಂದ ಹಾಗೂ ರೈತ ಸಮೂಹ ಹಾಗೂ ಸಮಾಜದ ದುರ್ಬಲ ವರ್ಗಕ್ಕೆ ನೀಡುತ್ತಿರುವ ಸಹಾಯ ಮುಂದುವರಿಸಲು ಸಹಕಾರಿ ಕ್ಷೇತ್ರಕ್ಕೆ ನಿರಂತರ ಬೆಂಬಲ ಸರಕಾರದಿಂದ ದೊರಕಿಸಬೇಕೆಂದು ನಿರ್ಧರಿಸಲಾಯಿತು.
ನಿಯೋಗದಲ್ಲಿ ಎಸ್ ಸಿ ಬ್ಯಾಂಕಿನ ಪುಷ್ಪರಾಜ ಹೆಗ್ಡೆ, ಅಳದಂಗಡಿಯ ಧಣ್ಣಪ್ಪ ಪೂಜಾರಿ, ವಸಂತ ಮಜಲು, ಕಾವಳ ಮುಡೂರಿನ ಪದ್ಮಶೇಖರ ಜೈನ್, ನೃಪರಾಜ ಬಂಗೇರ ಉಪಸ್ಥಿತರಿದ್ದರು. ಮುಂಡಾಜೆ ಬ್ಯಾಂಕ್ ಅಧ್ಯಕ್ಷ ಎನ್ ಎಸ್ ಗೋಖಲೆ ಸ್ವಾಗತಿಸಿದರು. ವಸಂತ ಮಜಲು ವಂದಿಸಿದರು. ಬೆಳ್ತಂಗಡಿ ಶಾಸಕ ಶ್ರೀ ವಸಂತ ಬಂಗೇರ ಅವರ ಕೋರಿಕೆಯಂತೆ ಈ ಸಭೆಯನ್ನು ಕರೆಯಲಾಗಿದ್ದು,ಶಾಸಕ ಬಿ. ರಮನಾಥ ರೈ,ಯೋಗಿಶ್ ಭಟ್, ಯು.ಟಿ.ಖಾದರ್,ಮಲ್ಲಿಕಾ ಪ್ರಸಾದ್ ಭಂಡಾರಿ ಸೇರಿದಂತೆ ಎಲ್ಲ ಸಹಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.