ಮಂಗಳೂರು, ಜುಲೈ24: ಮಾನವ ಜನ್ಮ ಶ್ರೇಷ್ಠವಾದುದು;ಇತರ ಪ್ರಾಣಿಗಳಿಗಿಂತ ವಿವೇಕ, ಬುದ್ಧಿ ಜ್ಞಾನ ಎಲ್ಲವೂ ಇದ್ದು ಪರಿಸರದೊಂದಿಗೆ ಬದುಕುವ ಬಗೆಯನ್ನು ತಿಳಿದುಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಗೋಪಾಲಕೃಷ್ಣ ಗೊಲ್ಲ ಅವರು ನುಡಿದರು.
ಅವರು ವಾರ್ತಾ ಇಲಾಖೆ ಮತ್ತು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಯಾ ಬೆಳಾಲು, ಬೆಳ್ತಂಗಡಿಯಲ್ಲಿ ಏರ್ಪಡಿಸಿದ್ದ 'ಸ್ವಚ್ಛತೆ ಮತ್ತು ನಮ್ಮ ಆರೋಗ್ಯ ' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಮ್ಮ ಆಹಾರ ಸೇವನೆ, ದೈನಂದಿನ ಆಚರಣೆಗಳು, ನೀರಿನ ಸೇವನೆ ಬಗ್ಗೆ ಹಳ್ಳಿಗಳಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಿದೆ. ಬಯಲು ಮಲಮೂತ್ರ ವಿಸರ್ಜನೆಯ ದುಷ್ಪರಿಣಾಮಗಳನ್ನು ಜನರು ಅರಿಯಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬೆಳಾಲು ಗ್ರಾಮಪಂಚಾಯತ್ ನ ಅಧ್ಯಕ್ಷ ಸುರೇಂದ್ರ ಅವರು ಮಾತನಾಡಿ, ಗ್ರಾಮದಲ್ಲಿ ಇನ್ನೂ 133 ಮನೆಗಳಲ್ಲಿ ಶೌಚಾಲಯ ನಿರ್ಮಾಣ ವಾಗಬೇಕಿದೆ ಎಂದರು. ಇದಕ್ಕಾಗಿ ರಾಜ್ಯ ಸರ್ಕಾರ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಯೋಜನೆ ನೆರವಿನೊಂದಿಗೆ ಜನೋಪಯೋಗಿ ಕೆಲಸಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.
ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಜಯರಾಂ ಅವರು, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆಗಿನ ನಿಕಟ ಸಂಪರ್ಕ ಕುರಿತು ವಿವರಿಸಿದರು. ವೈಯಕ್ತಿಕ ಸ್ವಚ್ಛತೆ, ಸಮುದಾಯ ಸ್ವಚ್ಛತೆ, ಸೊಳ್ಳೆಗಳಿಂದಾಗುವ ವಿವಿಧ ಜ್ವರಗಳ ಬಗ್ಗೆ, ಇಲಿ ಜ್ವರ ಹರಡುವ ಬಗ್ಗೆ, ಕೊಳಚೆ ನೀರಿನಲ್ಲಿ ಚಪ್ಪಲಿ ಹಾಕಿ ನಡೆಯುವ ಅಗತ್ಯವನ್ನು ವಿವರಿಸಿದರು. ಸುತ್ತಮುತ್ತಲ ಪರಿಸರದಲ್ಲಿ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಒಗೆದು ಸೊಳ್ಳೆ ಉತ್ಪತ್ತಿಯಾಗುವ ರೀತಿಯನ್ನು ವಿವರಿಸಿದರು.ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸುಶೀಲ, ಶಾಲಾ ಮುಖ್ಯೋಪಾಧ್ಯಾಯರಾದ ಧರ್ಮರಾಯ ಎಚ್. ಕೆ., ಎಸ್ ಡಿ ಎಂಸಿ ಅಧ್ಯಕ್ಷರು, ಗ್ರಾಮಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಭಟ್ ವಂದಿಸಿದರು. ಸವಿತ ಮತ್ತು ರಾಜೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ಜಗನ್ ಪವಾರ್ ನೇತೃತ್ವದ ಸಂಕೇತ್ ತಂಡದಿಂದ ಚೆಂಬು ಪುರಾಣ ಎಂಬ ನೀರು ನೈರ್ಮಲ್ಯ ಕುರಿತ ಬೀದಿ ನಾಟಕ ಏರ್ಪಡಿಸಲಾಗಿತ್ತು.