ಮಂಗಳೂರು, ಜುಲೈ,03: ಜನಸ್ಪಂದನ ಯಶಸ್ವಿಯಾಗಲು ಜನರು ಸ್ಪಂದಿಸಬೇಕು; ಆಡಳಿತ ಮನೆಬಾಗಿಲಿಗೆ ಬಂದಿರುವಾಗ ಅರ್ಹ ಫಲಾನುಭವಿಗಳು ಅದರ ಪ್ರಯೋಜನ ಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಹೇಳಿದರು.
ಮಂಗಳೂರಿನ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡುತ್ತಿದರು.
ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಹಾಗೂ ಯೋಜನೆಗಳ ಸದುಪಯೋಗವನ್ನು ಜನಪಡೆಯಲು ಮುಂದಾಗುವುದರಿಂದ ಮಾತ್ರ ಸಾಮಾಜಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧ್ಯ ಎಂದವರು ನುಡಿದರು.ಸುಮಾರು 750 ಜನರಿದ್ದ ಸಭೆಯಲ್ಲಿ 105 ಫಲಾನುಭವಿಗಳಿಗೆ ವಿವಿಧ ಪೆನ್ಷನ್, 55 ಜನರಿಗೆ ಭಾಗ್ಯಲಕ್ಷ್ಮಿ ಬಾಂಡ್, ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ 5 ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಸಭೆಯಲ್ಲಿ ಜಿ.ಪಂ. ಸದಸ್ಯ ವಿನೋದ ಮಾಡ, ತಾ.ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ದುಗ್ಗು ಪೂಜಾರಿ ಉಪಸ್ಥಿತರಿದ್ದರು. ತಹಸೀಲ್ದಾರ್ ಮಂಜುನಾಥ್, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.