ಮಂಗಳೂರು,ಜು.17:ಜಾಗತಿಕ ತಾಪಮಾನ ಏರಿಕೆ,ಮಾನವನ ದುರಾಸೆಗೆ ಪ್ರಕೃತಿ ಬಲಿಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ವನಮಹೋತ್ಸವವನ್ನು ಆಚರಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು. ಅವರಿಂದು ನೆಹರು ಮೈದಾನದಲ್ಲಿ ಅರಣ್ಯ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ನಗರ ಹಸುರೀಕರಣ ಅಭಿಯಾನದ ಅಂಗವಾಗಿ ನೆಹರು ಮೈದಾನದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಹಿಂದೆ ಕಾಡಿದ್ದರೆ ನಾಡು,ಮಳೆ ಎಂಬ ಘೋಷವಾಕ್ಯದಡಿ ನಮ್ಮ ಬದುಕು ಸಾಗುತ್ತಿತ್ತು; ಇಂದು ಕೈಗಾರಿಕೆ ಗಳಿಲ್ಲದಿದ್ದರೆ ಬದುಕೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ವಾಗಿದೆ. ಪ್ರಕೃತಿ ಮನುಷ್ಯನ ದುರಾಸೆಗೆ ಬಲಿಯಾಗುತ್ತಿದೆ. ಈ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕೆಲಸ ವಾಗಬೇಕಿದೆ. ವನ ಮಹೋತ್ಸವ ಒಣ ಮಹೋತ್ಸವ ವಾಗಬಾರದು ಎಂಬ ಸಂದೇಶವನ್ನು ಅವರು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎನ್. ಯೋಗೀಶ್ ಭಟ್ ಅವರು, ವೃಕ್ಷ ಸಂದೇಶ, ಸಂಕೇತವನ್ನು ಅರಿತರೆ ಮಾನವ ನಿರಂತರ ಬೆಳವಣಿಗೆ ಕಾಣಬಹುದು ಎಂದರು. ಬೆಳವಣಿಗೆ ಮತ್ತು ಪರಿಸರ ಜೊತೆ ಜೊತೆಯಾಗಿ ಸಾಗಿದರೆ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದ ಅವರು, ಮಂಗಳೂರು ಮಹಾನಗರಪಾಲಿಕೆ ಇದಕ್ಕೆ ಮಾದರಿಯಾಗಬೇಕು.ಕಾಂಕ್ರೀಟಿಕರಣದೊಂದಿಗೆ ಪಾರ್ಕ್ ಗಳು, ವನಗಳನ್ನು ಬೆಳೆಸಲು ಆದ್ಯತೆ ನೀಡಬೇಕು. ಸಮುದ್ರ ಕೊರೆತಕ್ಕೆ, ಫ್ಲೋರೈಡ್ ನೀರನ್ನು ಶುದ್ಧೀಕರಿಸಲು, ಉತ್ತಮ ಆರೋಗ್ಯಕ್ಕೆ ಸಸ್ಯಗಳು ಬಹಳಷ್ಟು ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಸಂಶೋಧನಾ ವರದಿಗಳು ತಿಳಿಸಿವೆ ಎಂದರು. ಶಿಕ್ಷಣ, ವೈದ್ಯಕೀಯದಂತೆ, ವೃಕ್ಷಾರ್ಯುವೇದಕ್ಕೂ, ಸಸ್ಯ ಸಂಪತ್ತು ಅಭಿವೃದ್ಧಿಗೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು.ವೈಜ್ಞಾನಿಕ ಸತ್ಯ ಅಡಗಿರುವ ಸಸ್ಯ ಶಾಸ್ತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ; ಶಾಲೆಗಳಲ್ಲಿ ಬ್ರಾಹ್ಮಿಯನ್ನು ಬೆಳೆಸಿ ಹೃದಯ ಹಾಗೂ ಬುದ್ದಿಮತ್ತೆ ಚುರುಕಾಗಿಸಲು ಈ ತೋಟಗಳು ನೆರವಾಗಲಿವೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ ಅವರು ಸಸಿ ನೆಡುವ ಬಗ್ಗೆ ನಾಗರೀಕರ ಜವಾಬ್ದಾರಿಯನ್ನು ನೆನಪಿಸಿ ದರಲ್ಲದೆ, ಗಿಡ ನೆಟ್ಟ ಬಳಿಕ ಅದರ ಬೆಳವಣಿಗೆ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಸಜಿಪ ಮನ್ನೂರಿನ ಮಂಗಲ್ಪಾಡಿಯ ನಾಲ್ವರು ಮಕ್ಕಳು ನೀರು ಪಾಲಾಗಿದ್ದು, ಪ್ರಾಕೃತಿಕ ವಿಕೋಪ ಪರಿಹಾರದಡಿ ಅವರ ಹೆತ್ತವರಾದ ಕೋಟೆಕಾರ ಶೇಖರ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಅವರು ಪರಿಹಾರದ ಚೆಕ್ ಪಡೆದರು. ಮಹಾಪೌರರಾದ ರಜನಿ ದುಗ್ಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಮಹಾಪೌರ ರಾಜೇಂದ್ರ ಕುಮಾರ್,ಪಾಲಿಕೆಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಹಾನಗರಪಾಲಿಕೆ ಸಹಯೋಗದೊಂದಿಗಿನ ನಗರ ಹಸುರೀಕರಣ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ 20 ವೈವಿಧ್ಯ ಜಾತಿಗಳ 20,000 ಗಿಡಗಳನ್ನು ನೆಟ್ಟಿದ್ದು, ಮುಂದಿನ 3 ವರ್ಷಗಳಲ್ಲಿ ಒಂದು ಲಕ್ಷ ಗಿಡ ನೆಡುವ ಯೋಜನೆಯಿದೆ ಎಂದರು. ಪಾಲಿಕೆ ಆಯುಕ್ತರಾದ ಡಾ. ವಿಜಯಪ್ರಕಾಶ್ ಅವರು ಸ್ವಾಗತಿಸುತ್ತಾ, ಪಾಲಿಕೆ 8 ಲಕ್ಷ ರೂ.ಗಳನ್ನು ಗಿಡನೆಡಲು ಅರಣ್ಯ ಇಲಾಖೆಗೆ ನೀಡಿದ್ದು, ರಸ್ತೆ ಇಕ್ಕೆಲಗಳಲ್ಲಿ, ಲೇಔಟ್ ಗಳಲ್ಲಿ, ನೀರು ಸ್ಥಾವರಗಳಲ್ಲಿ, ಸ್ಮಶಾನಗಳಲ್ಲಿ ಗಿಡ ನೆಡಲಾಗುವುದು ಎಂದರು. ಕಾರ್ಯಕ್ರಮಕ್ಕೂ ಮುನ್ನ ಸಸ್ಯ ಸಂಕುಲದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ವಿವಿಧ ಶಾಲಾ ಮಕ್ಕಳ ಸಹಯೋಗದೊಂದಿಗೆ ಜಾಥಾ ಆಯೋಜಿಸಲಾಗಿತ್ತು.ಸಮಾರಂಭದ ಆರಂಭದಲ್ಲಿ ರೋಶನಿ ನಿಲಯದ ಮಕ್ಕಳಿಂದ ವನಮಹೋತ್ಸವದ ಬಗ್ಗೆ ಕಿರು ನಾಟಕ ಪ್ರದರ್ಶನವಿತ್ತು. ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿ ಗಣೇಶ್ ವನಮಹೋತ್ಸವ ಸಂದೇಶ ನೀಡಿದರು. ಡೇನಿಯಲ್ ತೌರೋ ನಾಗರೀಕರ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ಪರಿಸರವಾದಿ ಉಮರ್ ಅವರು ಪರಿಸರ ಗೀತೆಯನ್ನೋದಿದರು.