Sunday, May 23, 2010
ಯಥಾಸ್ಥಿತಿಗೆ ಮರಳಿದ ಮಂಗಳೂರು ವಿಮಾನ ನಿಲ್ದಾಣ
ಮಂಗಳೂರು,ಮೇ23:ಬಜಪೆ ವಿಮಾನ ನಿಲ್ದಾಣ ಮತ್ತೆ ಯಥಾ ಸ್ಥಿತಿಗೆ ಮರಳಿದ್ದು, ನಿಲ್ದಾಣ ಇಂದು ಪ್ರಯಾಣಿಕರಿಂದ ತುಂಬಿತ್ತು. ನಿಲ್ದಾಣದ ಸಿಬ್ಬಂದಿಗಳಲ್ಲಿ ನಡೆಯಬಾರದ ಘಟನೆ ನಡೆದ ಬಗ್ಗೆ ವಿಷಾದವಿತ್ತು. ವಿಮಾನ ನಿಗದಿತ ಸಮಯಕ್ಕೆ ನಿಲ್ದಾಣದಲ್ಲಿ ಇಳಿಯ ದಿದ್ದಾಗ ಆರಂಭವಾದ ಆತಂಕ, ಪ್ರಾರ್ಥನೆಗೆ, ಅವಘಡದ ಸುದ್ದಿ ಆಘಾತ ನೀಡಿತ್ತು.ಆದರೆ ದುರಂತದ ಸುದ್ದಿ ತಲುಪುತ್ತಲೇ ತುರ್ತು ನಿರ್ವಹಣೆಯತ್ತ ಮುಖ ಮಾಡಿದ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಮತ್ತು ಜಿಲ್ಲಾಡಳಿತ ಸಾಧ್ಯವಿರುವ ಎಲ್ಲ ತುರ್ತು ಕ್ರಮಗಳನ್ನು ಕೈಗೊಂಡಿತ್ತು. 2006 ಡಿಸೆಂಬರ್ ನಿಂದ ರನ್ ವೇ ಯಲ್ಲಿ ಅಂತಾರಾಷ್ಟ್ರೀಯ ಮತ್ತು ಡೊಮೆಸ್ಟಿಕ್ ವಿಮಾನಗಳು ಇಳಿಯುತ್ತಿದ್ದು, ನಿಲ್ದಾಣದ ಕಾರ್ಯವೈಖರಿ ಹಾಗೂ ರನ್ ವೇಯಲ್ಲಿ ನಿಲ್ದಾಣದ ಅಧಿಕಾರಿಗಳು ಲೋಪ ಕಂಡಿಲ್ಲ.ನಿನ್ನೆ ಮಧ್ಯಾಹ್ನವೇ ಡಿಜಿಸಿ ಎ ಅಧಿಕಾರಿಗಳು ದುರಂತದ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ಆರಂಭಿಸಿದ್ದಾರೆ. ಮೃತರ ಸಂಬಂಧಿಗಳ ಅನುಕೂಲಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ದುಬೈನಿಂದ ವಿಶೇಷ ವಿಮಾನ ಸೌಲಭ್ಯ ನೀಡಿದ್ದು,ಇಂದು ಬೆಳಗ್ಗೆ 7.30ಕ್ಕೆ ವಿಶೇಷ ವಿಮಾನ 22 ಜನರೊಂದಿಗೆ ಬಜಪೆಗೆ ಆಗಮಿಸಿತ್ತು.ಇನ್ನು ಟೇಬಲ್ ಟಾಪ್ ಏರ ಪೋರ್ಟ್ ನಲ್ಲಿ ಸಕರಾತ್ಮಕ ಹಾಗೂ ನಕರಾತ್ಮಕ ಪರಿಣಾಮಗಳಿವೆ ಎಂಬುದನ್ನು ಒಪ್ಪಿಕೊಳ್ಳುವ ಅಧಿಕಾರಿಗಳು ವಿಮಾನ ನಿಲ್ದಾಣದ ಸೌಕರ್ಯ ಹಾಗೂ ರೂಪುರೇಷೆ ಸಮರ್ಪಕವಾಗಿದೆ. ನಿನ್ನೆ ನಡೆದ ದುರಂತಕ್ಕೆ ರನ್ ವೇ ಯಲ್ಲಿ ಯಾವುದೇ ತಾಂತ್ರಿಕ ಲೋಪಗಳಲ್ಲ ಎಂದು ಸ್ಪಷ್ಡಪಡಿಸಿದ ವಿಮಾಣ ನಿಲ್ದಾಣದ ಅಧಿಕಾರಿಗಳು, 2005 ರಲ್ಲಿ 1850 ಮೀಟರ್ ಇದ್ದ ರನ್ ವೇ ಯನ್ನು ನಂತರ 2450 ಮೀಟರ್ ವರೆಗೆ ವಿಸ್ತರಿಸಲಾಗಿದ್ದು, ಅಗತ್ಯಕ್ಕಿಂತ ಹೆಚ್ಚು ಸ್ಥಳ, ಮತ್ತು ಮೂಲಭೂತ ಸೌಕರ್ಯಗಳನ್ನು ನಿಲ್ದಾಣ ಹೊಂದಿದೆ ಎಂದು ತಿಳಿಸಿದ್ದಾರೆ.