ಮಂಗಳೂರು, ಮೇ 13: ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ತಾಲೂಕು ಕಚೇರಿಗಳಿಗೆ ಬರುವ ಸಾರ್ವಜನಿಕ ಅರ್ಜಿಗಳಲ್ಲಿ ಶೇ. 70ರಷ್ಟು ಪ್ರಕರಣಗಳನ್ನು ಒಂದೇ ದಿನದಲ್ಲಿ ವಿಲೇವಾರಿ ಮಾಡಲು ಸಾಧ್ಯವಿರುವುದರಿಂದ `ಏಕದಿನ ಅರ್ಜಿ ವಿಲೇವಾರಿ' ಎಂಬ ನೂತನ ಯೋಜನೆಯನ್ನು ಶೀಘ್ರದಲ್ಲೇ ಜಿಲ್ಲೆಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪ್ರಸಕ್ತ ಜಿಲ್ಲಾಧಿಕಾರಿಯ ಆಂತರಿಕ ಆಡಳಿತದಲ್ಲಿ ಮಾತ್ರ ಗಣಕೀಕೃತ ವ್ಯವಸ್ಥೆ ಇದೆ. ಮುಂದಿನ ಹಂತದಲ್ಲಿ ಸಾರ್ವಜನಿಕರ ಅರ್ಜಿ ವಿಲೇವಾರಿಗೆ ಸಂಬಂಧಿಸಿದಂತೆ ಗಣಕೀಕೃತ ವ್ಯವಸ್ಥೆಯನ್ನು ಅಳವಡಿಸಲಾಗುವುದು. ಇದರಿಂದ `ಕಾಗದ ರಹಿತ ಕಚೇರಿ' ವ್ಯವಸ್ಥೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ಪ್ರಥಮ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ತಾಲೂಕಿನಲ್ಲಿ ಈ ವ್ಯವಸ್ಥೆ ಆರಂಭಿಸಲಾಗುವುದು. ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವ ಮಾದರಿಯಲ್ಲಿ ಗಣಕೀಕೃತ ವ್ಯವಸ್ಥೆಯಲ್ಲಿ ಅರ್ಜಿದಾರರು ತಮ್ಮ ಭೂಮಿ, ಭೂಮಿಪರಿವರ್ತನೆ ಹಾಗೂ ಇನ್ನಿತರ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ಯಾವ ಹಂತದಲ್ಲಿದೆ ಎನ್ನುವುದನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಆನ್ ಲೈನ್ ಮೂಲಕ ಯಾವ ಪ್ರದೇಶದಲ್ಲಿದ್ದರೂ ಅರ್ಜಿದಾರರು ತಿಳಿದುಕೊಳ್ಳಬಹುದು. ಈ ವ್ಯವಸ್ಥೆ ಅನುಷ್ಠಾನ ಗೊಂಡರೆ ಕರ್ನಾಟಕ ದಲ್ಲೇ ಮೊತ್ತ ಮೊದಲ ಪೈಲಟ್ ಯೋಜನೆ ಇದಾಗಲಿದೆ. ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಸಂಬಂಧಿಸಿದ ಕಂದಾಯ ಇಲಾಖೆಯ ಅರ್ಜಿಗಳ ಮಾಹಿತಿಯನ್ನು ಗ್ರಾಮ ಪಂಚಾಯತ್ ಗಳಲ್ಲೂ ಪಡೆಯಬಹುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಮಟ್ಟದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮುಂದಿನ ಆರು ತಿಂಗಳಲ್ಲಿ ಜಿಲ್ಲೆಯಲ್ಲಿ ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.